ADVERTISEMENT

ಆನ್‌ಲೈನ್‌ ಮೂಲಕ ಪದವಿ ಪ್ರವೇಶಕ್ಕೆ ಸಿದ್ಧತೆ

ವಿಶ್ವವಿದ್ಯಾಲಯ ಪ್ರಕಟಣೆ ಬರುವವರೆಗೆ ಕಾಯಲಿವೆ ಸರ್ಕಾರಿ ಕಾಲೇಜುಗಳು

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:40 IST
Last Updated 19 ಜುಲೈ 2020, 16:40 IST

ಕಲಬುರ್ಗಿ: ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಇತರ ಕೋರ್ಸ್‌ಗಳ ಪ್ರವೇಶಕ್ಕೆ ಜಿಲ್ಲೆಯ ವಿವಿಧ ಕಾಲೇಜುಗಳು ತಯಾರಿ ನಡೆಸಿವೆ.

ತಕ್ಷಣದಿಂದಲೇ ಎಲ್ಲ ರೀತಿಯ ಪದವಿ ಹಾಗೂ ಇತರ ಕೋರ್ಸ್‌ಗಳ ಪ್ರವೇಶವನ್ನು ಆನ್‌ಲೈನ್‌ ಮೂಲಕ ಆರಂಭಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್‌. ಅಶ್ವತ್ಥನಾರಾಯಣ ಅವರು ಸೂಚನೆ ನೀಡಿದ ಬೆನ್ನಲ್ಲೇ, ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿ ಸ್ನೇಹಿ ‘ಗೂಗಲ್‌ ಫಾರ್ಮೆಟ್‌’ ರೂಪಿಸಲು ಚಿಂತನೆ ನಡೆದಿದೆ.

‘ಶರಣಬಸವೇಶ್ವರ ಕಲಾ ಪದವಿ ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗದಂತೆ ಆನ್‌ಲೈನ್‌ನಲ್ಲಿ ಪ್ರವೇಶಾತಿ ಅರ್ಜಿಗಳನ್ನು ನೀಡಲಾಗುವುದು. ಒಂದು ಯುಆರ್‌ಎಲ್‌ ನಿರ್ಮಿಸಿ, ಅದರ ಮೂಲಕ ಸುಲಭವಾಗಿ ಅರ್ಜಿ ಸಿಗುವಂತೆ ಮಾಡುವ ಉದ್ದೇಶವಿದೆ. ಈಗಾಗಲೇ ನಮ್ಮ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಎಲ್ಲ ಮಾಹಿತಿ ಇದೆ. ಪದವಿ ಪ್ರವೇಶದ ಅರ್ಜಿಯನ್ನು ಅಪ್‌ಡೇಟ್‌‌ ಮಾಡಿ ನೀಡುತ್ತೇವೆ. ಜತೆಗೆ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಮಾಡಿ, ಅಲ್ಲಿಯೂ ಅರ್ಜಿಯನ್ನು ಕಳುಹಿಸಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶವಿದೆ’ ಎಂದು ಪ್ರಾಂಶುಪಾಲ ನಾಗರಾಜ ಸಿ. ದೇವತ್ಕಲ್‌ ಹೇಳಿದರು.

ADVERTISEMENT

‘ವಿದ್ಯಾರ್ಥಿಯ ಹೆಸರು, ಪಾಲಕರ ಹೆಸರು, ಭಾವಚಿತ್ರ, ವಿಳಾಸ, ಆಧಾರ್ ಸಂಖ್ಯೆ, ಅಂಕಪಟ್ಟಿ, ಬ್ಯಾಂಕ್‌ ಅಕೌಂಟ್‌ ಮಾಹಿತಿ... ಹೀಗೆ ಎಲ್ಲವನ್ನೂ ಸುಲಭವಾಗಿ ಭರ್ತಿ ಮಾಡುವ ವಿದ್ಯಾರ್ಥಿ ಸ್ನೇಹಿ ಜಾಲತಾಣವನ್ನು ನೀಡಲಾಗುವುದು. ಅದಾಗಿಯೂ ಅರ್ಜಿ ಸಲ್ಲಿಸಲು ಆಗದಿದ್ದವರಿಗೆ ಆಫ್‌ಲೈನ್‌ ಮೂಲಕವೂ ಪಡೆಯಲಾಗುವುದು. ಆದರೆ, ದಟ್ಟಣೆ ಆಗದಂತೆ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿ ದಿನ ಆಹ್ವಾನ ನೀಡಲಾವುದು’ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಕಲಾ ಹಾಗೂ ವಾಣಿಜ್ಯ ಪದವಿ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಶೀಲವಂತ ಅವರು, ‘ನಮ್ಮ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿ ಬರುತ್ತಾರೆ. ಹಲವರಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಇರುವುದಿಲ್ಲ. ಕೆಲವೆಡೆ ಇಂಟರ್‌ನೆಟ್‌ ಸಂಪರ್ಕ ಸಿಗುವುದಿಲ್ಲ. ಅಂಥ ವಿದ್ಯಾರ್ಥಿಗಳಿಗೆ ಬೇರೆ ವ್ಯವಸ್ಥೆ ಮಾಡಬೇಕಿದೆ. ಪ್ರತಿ ವರ್ಷವೂ ನಾವು ಆಫ್‌ಲೈನ್‌ಲ್ಲಿ ಅರ್ಜಿ ಪಡೆದರೂ ಅದನ್ನು ಆನ್‌ಲೈನ್‌ಗೆ ಹಾಕುತ್ತೇವೆ. ಈ ವರ್ಷ ವಿದ್ಯಾರ್ಥಿಗಳೇ ಭರಿಸುವಂತೆ ಮಾಡಿದ್ದು ಒಳ್ಳೆಯದೇ. ಇದರಿಂದ ಯಾವೊಬ್ಬ ವಿದ್ಯಾರ್ಥಿಯೂಪ್ರವೇಶದಿಂದವಂಚಿತರಾಗದಂತೆ ನೋಡಿಕೊಳ್ಳುವುದು ಮುಖ್ಯ’ ಎಂದರು.

‘ಪ್ರವೇಶಾತಿ ಬಗ್ಗೆ ವಿಶ್ವವಿದ್ಯಾಲಯದಿಂದ ಮಾರ್ಗಸೂಚಿ ಪ್ರಕಟಣೆ ಬಂದ ನಂತರವೇ ನಾವು ಏನು ಮಾಡಬೇಕು ಎಂದು ನಿರ್ಧರಿಸಲು ಸಾಧ್ಯ. ಈ ಹಿಂದೆ ಕೂಡ ಪರೀಕ್ಷಾ ಶುಲ್ಕ ಭರಿಸುವಂತೆ ವಿಶ್ವವಿದ್ಯಾಲಯ ಹೇಳಿದಾಗ, ಹಲವು ವಿದ್ಯಾರ್ಥಿಗಳು ಬ್ಯಾಂಕ್‌ಗೆ ಹೋಗಿ ಚನಲ್‌ಗಳನ್ನು ತಂದು ನಮ್ಮಲ್ಲಿಗೇ ಬಂದರು. ಆಗ ಒಂದು ಬಾಕ್ಸ್‌ ಮಾಡಿ, ಅದರಲ್ಲಿ ಹಾಕಿ ಹೋಗುವಂತೆ ಸೂಚಿಸಿದೆವು. ನಂತರ ಕಾಲೇಜಿನ ಮೂಲವೇ ವಿಶ್ವವಿದ್ಯಾಲಯಕ್ಕೆ ಶುಲ್ಕ ಕಳುಹಿಸಿದೆವು. ಇದೇ ರೀತಿ ಉಪಾಯ ಮಾಡುವ ವಿಚಾರವೂ ನಮ್ಮಲ್ಲಿ ನಡೆದಿದೆ’ ಎಂದೂ ಅವರು ಹೇಳಿದರು.

ನೀಟ್‌, ಸಿಇಟಿ ಆಗುವವರೆಗೂ ಸಮಯವಿದೆ:

ಸದ್ಯಕ್ಕೆ ಬೇಸಿಕ್‌ ವಿಜ್ಞಾನ ಆಯ್ಕೆ ಮಾಡಿಕೊಂಡವರು ಮಾತ್ರ ಕಾಲೇಜಿಗೆ ಕರೆ ಮಾಡಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ, ನೀಟ್‌ (ಎನ್‌ಇಇಟಿ), ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಗಿದ ಮೇಲೆಯೇ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ಪದವಿಯತ್ತ ಮರಳುತ್ತಾರೆ. ಹಾಗಾಗಿ, ವಿಜ್ಞಾನ ಕಾಲೇಜುಗಳಿಗೆ ಇನ್ನೂ ಸಮಯವಿದೆ ಎಂಬುದು ಶರಣಬಸವೇಶ್ವರ ವಿಜ್ಞಾನ‌ ಕಾಲೇಜಿನ ಪ್ರಾಂಶುಪಾಲ ಎಸ್‌.ಜಿ.ಡೊಳ್ಳೇಗೌಡ ಅವರ ಮಾಹಿತಿ.

ಪದವಿ ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷಕ್ಕೆ ಪ್ರವೇಶ ಪಡೆಯಬೇಕಾದ ವಿದ್ಯಾರ್ಥಿಗಳ ಬಗ್ಗೆ ಮೊದಲು ನಿರ್ಧಾರ ಕೈಗೊಳ್ಳಬೇಕಿದೆ. ಆಗ ಮಾತ್ರ ಪ್ರಥಮ ವರ್ಷದ ಆನ್‌ಲೈನ್‌ ಪ್ರವೇಶಕ್ಕೆ ರೂಪುರೇಶೆ ನಿರ್ಮಿಸಬಹುದು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.