ಕಲಬುರಗಿ: ‘ಆರ್‌ಎಸ್‌ಎಸ್ ಮತ್ತು ಬಿಜೆಪಿ ಪಕ್ಷ ಮಂಡ್ಯ ಜಿಲ್ಲೆಯಲ್ಲಿ ಕೋಮುವಾದದ ವಿಷ ಬೀಜ ಬಿತ್ತಲು ಹೊರಟಿದೆ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಸಂಘಟನೆ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೈಚಾರಿಕತೆಗೆ ನೆಲೆಯಾಗಿದ್ದ ಮಂಗಳೂರು ಕೋಮುವಾದದ ಶಕ್ತಿ ಕೇಂದ್ರವನ್ನಾಗಿಸಿದ ಆರ್‌ಎಸ್‌ಎಸ್, ಈಗ ರೈತ ಚಳುವಳಿ ಹಾಗೂ ದಲಿತ ಚಳುವಳಿಯ ಕೇಂದ್ರವಾದ ಮಂಡ್ಯದಲ್ಲಿ ಕೋಮುವಾದ ರಾಜಕಾರಣಕ್ಕೆ ಅಡಿಗಲ್ಲು ಹಾಕಲು ಪ್ರಯತ್ನಿಸುತ್ತಿದೆ’ ಎಂದರು.
‘ಮದ್ದೂರು ಗಣೇಶಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಹಿಂದೂ–ಮುಸ್ಲಿಂ ಸಮುದಾಯದವರು ವಿವೇಚನೆಯಿಂದ ವರ್ತಿಸಬೇಕಿತ್ತು. ಸಮುದಾಯದಲ್ಲಿ ಗಲಭೆಗೆ ಪ್ರಚೋದಿಸುವ ವಿಷಜಂತುಗಳು ಎರಡು ಸಮುದಾಯದಲ್ಲಿ ಇದ್ದಾರೆ. ಇಂಥ ಸಂದರ್ಭದಲ್ಲಿ ರಾಜಕೀಯ ನಾಯಕರು ಶಾಂತಿ ನಿರ್ಮಿಸುವ ಕೆಲಸ ಮಾಡಬೇಕೇ ಹೊರೆತು ತಮ್ಮ ರಾಜಕೀಯ ನೆಲೆ ವಿಸ್ತರಿಸಲು ಮುಂದಾಗಬಾರದು’ ಎಂದರು.
‘ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಬಣ್ಣ ಬಯಲು ಮಾಡುವ ಮತ್ತು ಕೋಮುವಾದ ಶಡ್ಯಂತ್ರ ತಡೆಯುವ ಶಕ್ತಿ ದಲಿತ ಚಳವಳಿ, ರೈತ ಚಳವಳಿ ಹಾಗೂ ಭಾಷಾ ಚಳವಳಿಗೆ ಮಾತ್ರ ಸಾಧ್ಯ. ಆದ್ದರಿಂದ ಇವುಗಳು ಮತ್ತೆ ಒಂದೇ ವೇದಿಕೆಯಲ್ಲಿ ಬರಬೇಕು’ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪೂರ, ಮಹೇಶ ಕೋಕಿಲೆ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.