ಕಲಬುರಗಿ: ‘ದಲಿತ ಮುಖಂಡ ವಿಠ್ಠಲ ದೊಡ್ಡಮನಿ ಅವರು ಮಾದಿಗರ ಹೋರಾಟ ನಾಟಕ ಹಾಗೂ ಜಾತಿಗಣತಿ ಹೆಚ್ಚುಕಮ್ಮಿಯಾಗಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಜಿಲ್ಲಾ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ಮುಖಂಡ ಲಿಂಗರಾಜ ತಾರಫೈಲ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದಾಶಿವ ಆಯೋಗದ ವರದಿ ಯಾವುದೇ ಒಂದು ಜಾತಿಗೆ ಮೆಚ್ಚಿಸುವಂತಹದ್ದಲ್ಲ. ದಲಿತರಲ್ಲಿ ಬರುವ ಎಲ್ಲ ಜಾತಿ ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲು ವರದಿ ತಯಾರಿಸಲಾಗಿದೆ. ಈ ವರದಿಯನ್ನು ಸರಿಯಾಗಿ ತಿಳಿದುಕೊಳ್ಳದೇ ವಿಠ್ಠಲ ದೊಡ್ಡಮನಿ ವಿರೋಧ ಮಾಡುತ್ತಿದ್ದಾರೆ. ಅವರ ಹೇಳಿಕೆಗೆ ಯಾರೂ ಕಿವಿಗೊಡಬಾರದು’ ಎಂದರು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುಪ್ರೀಂ ಕೋರ್ಟ್ ತೀರ್ಪಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಕಲ್ಪಿಸುತ್ತಾರೆ ಎಂದು ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಹೋರಾಟಗಾರರಾದ ಡಿ.ಜಿ.ಸಾಗರ, ಸೂರ್ಯಕಾಂತ ನಿಂಬಾಳ್ಕರ್, ಅರ್ಜುನ ಭದ್ರೆ, ಮಲ್ಲೇಶಿ ಸಜ್ಜನ್ ಸೇರಿದಂತೆ ಅನೇಕರು ಒಳಮೀಸಲಾತಿ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಜಾರಿ ವಿಳಂಬವಾದರೆ ಎಡಗೈ–ಬಲಗೈ ಎನ್ನುವ ಯಾವುದೇ ಭೇದಭಾವವಿಲ್ಲದೇ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು. ರಾಜ್ಯ ಬಂದ್‌ಗೆ ಕರೆ ಕೊಡಲಾಗುವುದು’ ಎಂದು ತಿಳಿಸಿದರು.
ಪ್ರಮುಖರಾದ ರಾಜು ವಾಡೇಕರ್, ದಶರಥ ಕಲಗುರ್ತಿ, ಪ್ರಕಾಶ ಮಾಳಗೆ, ಪ್ರದೀಪ ಬಾಚನಾಳ, ದತ್ತು ಭಾಸಗಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.