ADVERTISEMENT

ಬಿ.ಜಿ.ಪಾಟೀಲಗೆ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಸವಾಲು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 12:44 IST
Last Updated 29 ನವೆಂಬರ್ 2021, 12:44 IST
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರು ಗ್ರಾಮ ಪಂಚಾಯಿತಿ ಸದಸ್ಯರ ಪ್ರಚಾರ ಸಭೆಯಲ್ಲಿ ಮಾತನಾಡಿದರು
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರು ಗ್ರಾಮ ಪಂಚಾಯಿತಿ ಸದಸ್ಯರ ಪ್ರಚಾರ ಸಭೆಯಲ್ಲಿ ಮಾತನಾಡಿದರು   

ಚಿತ್ತಾಪುರ: ‘ಚುನಾಯಿತ ಪ್ರತಿನಿಧಿಗಳ ಪ್ರತಿನಿಧಿಯಾಗಿ ಆರು ವರ್ಷಗಳ ಹಿಂದೆ ವಿಧಾನ ಪರಿಷತ್ತಿಗೆ ಪದಾರ್ಪಣೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಬಿ.ಜಿ ಪಾಟೀಲ್ ಅವರು ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ಯಾವುದೇ ವೇದಿಕೆಯಲ್ಲಿ ಹತ್ತು ನಿಮಿಷ ಮಾತಾಡಿ ತೋರಿಸಲಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸವಾಲು ಹಾಕಿದರು.

ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಸೋಮವಾರ ದಂಡೋತಿ, ಮೊಗಲಾ, ಭಾಗೋಡಿ, ಇವಣಿ ಗ್ರಾಮ ಪಂಚಾಯಿತಿಗಳ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಆರು ವರ್ಷದ ಅವರ ಸಾಧನೆ, ಅಭಿವೃದ್ಧಿ, ಪಂಚಾಯಿತಿ ಸದಸ್ಯರ ಸಮಸ್ಯೆ ಪರಿಹಾರ ಕುರಿತು ಮಾತನಾಡಲಿ. ಬಿ.ಜಿ ಪಾಟೀಲ್ ಅವರು ಮತ ಕೊಟ್ಟವರ ಸಮಸ್ಯೆ ಕೇಳದೆ, ಏನೂ ಕೆಲಸ ಮಾಡದೆ ಯಾವ ನೈತಿಕೆಯತೆಯಿಂದ ಮತ ಕೇಳುತ್ತಾರೆ’ ಎಂದು ಟೀಕಿಸಿದರು.

ADVERTISEMENT

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದ ಗ್ರಾಮ ಪಂಚಾಯಿತಿ ಮೂಲಕ ಬಡವರಿಗೆ ನೀಡುತ್ತಿದ್ದ ವಿವಿಧ ವಸತಿ ಯೋಜನೆ ನಿಲ್ಲಿಸಿದೆ. 15ನೇ ಹಣಕಾಸು ಯೋಜನೆಯ ಅನುದಾನ ಕಡಿತ ಮಾಡಲಾಗಿದೆ. ಈ ಬಗ್ಗೆ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆಯೆ? ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಸಮಗ್ರ ಮಾಹಿತಿ ಇರುವ ನಾನು ಜನರ ನಡುವೆ ಬೆಳೆದವನು. ಗ್ರಾಮಗಳ ತಳಮಟ್ಟದ ಸಮಸ್ಯೆಗಳ ಅರಿವಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ‘ಇದು ಬಡವ ಮತ್ತು ಶ್ರೀಮಂತರ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಬಿಜೆಪಿ ಅಭ್ಯರ್ಥಿ ಹಣದ ಬಲದಿಂದ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಗುಣದಿಂದ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಮರಗೋಳ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ರಾಜಶೇಖರ ತಿಮ್ಮನಾಯಕ, ವಿರುಪಾಕ್ಷ ಗಡ್ಡದ್, ಅಣ್ಣರಾವ್ ಸಣ್ಣೂರಕರ್, ವೀರಭದ್ರ ಮೊಗಲಾ ಅವರು ಮಾತನಾಡಿದರು. ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಾಪಣ್ಣ ಗಂಜಗಿರಿ, ಮಲ್ಲಪ್ಪ ಹೊಸಮನಿ, ಜಯಪ್ರಕಾಶ ಕಮಕನೂರ, ಡಾ.ದಾವೂದ್ ಪಟೇಲ್, ರಸೀದ್ ಪಠಾಣ್, ಮುನಿಯಪ್ಪ ಕೊಳ್ಳಿ, ಮಲ್ಲಿಕಾರ್ಜುನ ಪೂಜಾರಿ, ಶಂಕರ ಕೊಳ್ಳಿ, ಏಜಾಜ್ ಪಠಾಣ್, ಶರಣು ಡೋಣಗಾಂವ, ಬಸವರಾಜ ಬೆಳಗುಂಪಾ, ರಾಜು ಚೌಧರಿ ಹಾಗೂ ದಂಡೋತಿ, ಮೊಗಲಾ, ಭಾಗೋಡಿ, ಇವಣಿ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.