ADVERTISEMENT

ರಫೇಲ್ ಹಗರಣದ ಬಗ್ಗೆ ನಿರಂತರ ಹೋರಾಟ: ಸಂಸದ ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 11:39 IST
Last Updated 5 ಜನವರಿ 2019, 11:39 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘2019ರ ಲೋಕಸಭಾ ಚುನಾವಣೆಗೆ ರಫೇಲ್ ಯುದ್ಧ ವಿಮಾನ ಖರೀದಿ ಹಗರಣವೇ ಕಾಂಗ್ರೆಸ್‌ನ ಪ್ರಮುಖ ಅಸ್ತ್ರವಾಗಿದೆ. ಈ ಹಗರಣದ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುವುದು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಫೇಲ್‌ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದುವರೆಗೂ ತೃಪ್ತಿಕರ ಉತ್ತರ ನೀಡಿಲ್ಲ. ಸಂಸತ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅರ್ಧಂಬರ್ಧ ಉತ್ತರ ಕೊಟ್ಟಿದ್ದಾರೆ. ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಹೀಗಾಗಿ ಬಜೆಟ್ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಸದಾ ವಿದೇಶ ಪ್ರವಾಸದಲ್ಲಿ ಇರುತ್ತಾರೆ. ಅಲ್ಲಿಂದ ಬಂದ ಮೇಲೆ ಅಲ್ಲಿ ಏನಾಯಿತು, ಯಾವ ಒಡಂಬಡಿಕೆ ಮಾಡಿಕೊಂಡರು ಎಂಬುದರ ಬಗ್ಗೆ ಸಂಸತ್‌ಗೆ ಮಾಹಿತಿ ನೀಡುವುದಿಲ್ಲ. ನಾವು ಕೇಳಿದ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ. ಆದರೆ, ಸಾರ್ವಜನಿಕ ಭಾಷಣದಲ್ಲಿ ಮಾತನಾಡುತ್ತಾರೆ. ಆದ್ದರಿಂದ ಜಂಟಿ ಸದನ ಸಮಿತಿ (ಜೆಪಿಸಿ) ರಚನೆಗೆ ಒತ್ತಾಯಿಸಿ ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಕಣ್ಗಾವಲು ಬೇಡ: ‘ಗುಪ್ತಚರ ಘಟಕ (ಐ.ಬಿ), ರಾ ಮತ್ತು ಸಿಬಿಐ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ 10 ಸಂಸ್ಥೆಗಳಿಗೆ ಯಾವುದೇ ಕಂಪ್ಯೂಟರ್‌ನಲ್ಲಿನ ಮಾಹಿತಿಯ ಮೇಲೆ ಸಂಪೂರ್ಣ ಕಣ್ಗಾವಲು ಇರಿಸುವ ಮುಕ್ತ ಅಧಿಕಾರ ನೀಡಿರುವುದು ಖಂಡನೀಯ. ಇದನ್ನು ನಾವು ಎಷ್ಟೇ ವಿರೋಧಿಸಿದರೂ ಆ ಸಂಸ್ಥೆಗಳಿಗೆ ಅಧಿಕಾರ ನೀಡಿದ್ದಾರೆ. ಇದರಿಂದ ಸಾಮಾನ್ಯ ಜನರ ಮೂಲಭೂತ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಅದರ ಬದಲು ಯಾವುದಾದರೂ ವಿಷಯಕ್ಕೆ ಸಂಬಂಧಪಟ್ಟಂತೆ ನಿರ್ದಿಷ್ಟ ಮಾಹಿತಿ ಪಡೆಯಲು ಈ ಅಧಿಕಾರವನ್ನು ನೀಡಬಹುದಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.