ADVERTISEMENT

ಹೆಸರು ಖರೀದಿ ಕೇಂದ್ರ ತೆರೆಯದಿದ್ದರೆ ಹೋರಾಟ

ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಶಾಸಕರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 10:24 IST
Last Updated 6 ಸೆಪ್ಟೆಂಬರ್ 2019, 10:24 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಕಲಬುರ್ಗಿ: ‘ಜಿಲ್ಲೆಯಲ್ಲಿ ಹೆಸರು ಬೆಳೆದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಒಂದು ವಾರದಲ್ಲಿ ಹೆಸರು ಖರೀದಿ ಕೆಂದ್ರ ತೆರೆಯಬೇಕು. ಇಲ್ಲದಿದ್ದರೆ ರೈತರ ಜತೆ ಸೇರಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಎಚ್ಚರಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರೈತರನ್ನು ತೀವ್ರ ಕಡೆಗಣಿಸಿದೆ. ಅದರಲ್ಲೂ ಹೈದರಾಬಾದ್‌ ಕರ್ನಾಟಕ ಭಗದ ರೈತರು ಬದುಕಿದ್ದಾರೆ ಎಂಬುದನ್ನೇ ಮುಖ್ಯಮಂತ್ರಿ ಮರೆತಿದ್ದಾರೆ. ಇಡೀ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಹೋಗಿದ್ದು, ಜನಸಾಮಾನ್ಯರ ಹಿತ ಮರೆತಿದೆ’ ಎಂದು ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಹರಿಹಾಯ್ದರು.

‘ಜಿಲ್ಲೆಯಲ್ಲಿ ಸುಮಾರು 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹೆಸರು ಬೆಳೆದಿದ್ದಾರೆ. ಆದರೆ, ಅಧಿಕಾರಿಗಳು ಕೇವಲ 65 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸರಿಯಾದ ಸಮೀಕ್ಷೆ ನಡೆಸಿ ನಿಖರ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ಅವಶ್ಯಕತೆ ಏನಿದೆ’ ಎಂದು ಕಿಡಿಯಾಡಿದರು.

ADVERTISEMENT

‘ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಹೆಸರಿಗೆ ₹ 5,200 ದರವಿದೆ. ಆದರೆ, ಕೇಂದ್ರ ಸರ್ಕಾರ ₹ 7,025 ಬೆಂಬಲ ಬೆಲೆ ಘೋಷಿಸಿದೆ. ಅಂದರೆ ಪ್ರತಿ ಕ್ವಿಂಟಲ್‌ಗೆ ಪ್ರತಿಯೊಬ್ಬ ರೈತನಿಗೂ ₹ 1,825ರಷ್ಟು ನಷ್ಟ ಉಂಟಾಗುತ್ತಿದೆ’ ಎಂದು ಶರಣಪ್ರಕಾಶ ಲೆಕ್ಕಾಚಾರ ಹೇಳಿದರು.

‘ಈಗಾಗಲೇ ಸಾವಿರಾರು ರೈತರು ಕೈಗೆ ಬಂದಷ್ಟೇ ದರದಲ್ಲಿ ಹೆಸರು ಮಾರಿಬಿಟ್ಟಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಖರೀದಿ ಕೆಂದ್ರಗಳನ್ನು ತೆರೆಯಬೇಕು. ಕೇಂದ್ರ ಸೂಚಿಸಿದ ಬೆಂಬಲ ಬೆಲೆಗೆ ಹೆಚ್ಚುವರಿಯಾಗಿ, ಪ್ರತಿ ಕ್ವಿಂಟಲ್‌ಗೆ ₹ 500 ಪ್ರೋತ್ಸಾಹಧನ ಸೇರಿಸಿ ಖರೀದಿ ಮಾಡಬೇಕು’ ಎಂದೂ ಅವರು ಒತ್ತಾಯಿಸಿದರು.

ಹೈ.ಕ ಭಾಗಕ್ಕೆ ಸಚಿವರೇ ಇಲ್ಲವಲ್ಲ ಸ್ವಾಮಿ:

‘ಹೈರದರಾಬಾದ್‌ ಕರ್ನಾಟಕ ಭಾಗದಲ್ಲಿ 17 ಮಂದಿ ಬಿಜೆಪಿ ಶಾಸಕರಿದ್ದಾರೆ. ಆದರೆ, ಒಬ್ಬರಿಗೆ ಮಾತ್ರ ಕ್ರೀಡಾ ಸಚಿವ ಸ್ಥಾನ ಕೊಟ್ಟು ಮೂಗಿಗೆ ತುಪ್ಪ ಸವರಿದ್ದಾರೆ. ಯಾವ ಜಿಲ್ಲೆಗೂ ಇದೂವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ. ಇಷ್ಟೊಂದು ಸಮಸ್ಯೆಗಳ ಮಧ್ಯೆ ಬಳಲುತ್ತಿರುವ ರೈತರ ಕೂಗು ಕೇಳುವವರ್‍ಯಾರು? ನಾವು ಯಾರ ಬಳಿ ನಮ್ಮ ಸಂಕಷ್ಟ ಹೇಳಿಕೊಳ್ಳಬೇಕು? ಒಬ್ಬ ಸಚಿವರನ್ನು ಇಟ್ಟುಕೊಂಡು ಏನು ಪ್ರಗತಿ ನಿರೀಕ್ಷಿಸಲು ಸಾಧ್ಯ?’ ಎಂದೂ ಖಡಕ್‌ ಆಗಿ ಪ್ರಶ್ನಿಸಿದರು.

‘ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕೂಡ ಈ ಭಾಗದವರನ್ನೇ ಅಧ್ಯಕ್ಷರಾಗಿ ನೇಮಿಸಬೇಕು ಎಂದು ಮಂಡಳಿ ಜಾರಿಗೆ ಬಂದ ಸಂದರ್ಭದಲ್ಲಿ ನಿಯಮ ಮಾಡಲಾಗಿದೆ. ಅಧ್ಯಕ್ಷರ ನೇಮಕಾತಿ ಉಪಸಮಿತಿಯೇ ಈ ನಿರ್ಧಾರ ಪ್ರಕಟಿಸಿದೆ. ಬಿಜೆಪಿ ಸರ್ಕಾರ ಹೊರಗಿನವರನ್ನು ನೇಮಿಸಿದರೆ ನಾವು ಸುಮ್ಮನಿರುವುದಿಲ್ಲ’ ಎಂದರು.

ಹೆಸರು ಬದಲಿಸುವುದು ಹಾಗಿರಲಿ; ಮೊದಲು ಕೆಲಸ ಮಾಡಿ:

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸುವುದಾದರೆ ನಮ್ಮ ಬೆಂಬಲವಿದೆ. ಆದರೆ, ಹೆಸರು ಬದಲಿಸಿದರೆ ಏನು ಪ್ರಯೋಜನ? ಜನರ ಕಲ್ಯಾಣ ಕಾರ್ಯ ಮಾಡಬೇಕು. ಇದಕ್ಕೆ ಬದ್ಧರಾಗುವುದಾದರೆ ಮಂಡಳಿಗೆ ಈಗಲೇ ₹ 5 ಸಾವಿರ ಕೋಟಿ ನೀಡಿ’ ಎಂದೂ ಅವರು ಸವಾಲು ಎಸೆದರು.

ಶಾಸಕ ಅಜಯಸಿಂಗ್‌, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಕೆ.ಬಿ.ಶಾಣಪ್ಪ, ಸುಭಾಷ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.