ADVERTISEMENT

ಮಕ್ಕಳಿಗೆ ಕಾಂಗ್ರೆಸ್‌ನಿಂದ ‘ಶಕ್ತಿ ಕಿಟ್‌’

ಅಪೌಷ್ಟಿಕತೆ ನೀಗಿಸಲು ‘ಪೌಷ್ಟಿಕಾಂಶಯುಕ್ತ ತಿನಿಸು–ಪೌಡರ್‌, ಡ್ರೈಫ್ರೂಟ್ಸ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:29 IST
Last Updated 18 ಜೂನ್ 2021, 5:29 IST
ಪೌಷ್ಟಿಕಾಂಶವುಳ್ಳ 'ಶಕ್ತಿ ಕಿಟ್'ನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಪರಿಶೀಲಿಸಿದರು. ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಡಾ.ಶರಣಪ್ರಕಾಶ ಪಾಟೀಲ, ಅಲ್ಲಮ್ಮಪ್ರಭು ಪಾಟೀಲ, ಡಾ ಕಿರಣ್ ದೇಶಮುಖ, ಈರಣ್ಣ ಝಳಕಿ ಇದ್ದರು
ಪೌಷ್ಟಿಕಾಂಶವುಳ್ಳ 'ಶಕ್ತಿ ಕಿಟ್'ನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಪರಿಶೀಲಿಸಿದರು. ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಡಾ.ಶರಣಪ್ರಕಾಶ ಪಾಟೀಲ, ಅಲ್ಲಮ್ಮಪ್ರಭು ಪಾಟೀಲ, ಡಾ ಕಿರಣ್ ದೇಶಮುಖ, ಈರಣ್ಣ ಝಳಕಿ ಇದ್ದರು   

ಕಲಬುರ್ಗಿ: ‘ಕೊರೊನಾ ಮೂರನೇ ಅಲೆಯಿಂದ ಮಕ್ಕಳಿಗೆ ಅಪಾಯ ಎಂದು ತಜ್ಞರು ಹೇಳಿದ್ದಾರೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಅಪೌಷ್ಟಿಕತೆ ನೀಗಿಸಲು ಪೌಷ್ಟಿಕಾಂಶಯುಕ್ತ ತಿನಿಸು ಇರುವ ‘ಶಕ್ತಿ ಕಿಟ್‌’ಗಳನ್ನು ಕಾಂಗ್ರೆಸ್‌ ಪಕ್ಷದಿಂದವಿತರಿಸಲಾಗುವುದು’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

‘ಪೌಷ್ಟಿಕಾಂಶಯುಕ್ತ ತಿನಿಸು– ಪೌಡರ್‌, ಡ್ರೈಫ್ರೂಟ್ಸ್‌ ಮುಂತಾದ ಪದಾರ್ಥಗಳು ಈ ಕಿಟ್‌ನಲ್ಲಿವೆ. ಮೊದಲ ಹಂತದಲ್ಲಿ 5 ಸಾವಿರ ಕಿಟ್‌ಗಳನ್ನು ಚಿತ್ತಾಪುರ ತಾಲ್ಲೂಕಿನಲ್ಲಿ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ನಮ್ಮ ಎಲ್ಲ ಶಾಸಕರೂ ಅವರವರ ತಾಲ್ಲೂಕುಗಳಲ್ಲಿನೀಡಲಿದ್ದಾರೆ’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಇದೇ ಭಾಗದಲ್ಲಿ ಮೂರನೆ ಅಲೆ ಹೆಚ್ಚು ಪೆಟ್ಟು ನೀಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಭಾಗದಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸರ್ಕಾರ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಲಸಿಕೆ ಪೂರೈಸುವಲ್ಲಿ ಮಲತಾಯಿ ಧೋರಣೆ ಏಕೆ?:‘ಜಿಲ್ಲೆಯ ಜನಸಂಖ್ಯೆ ಯಲ್ಲಿ ಇನ್ನೂ ಕೇವಲ ಶೇ 10ರಷ್ಟು ಮಂದಿಗೆ ಮಾತ್ರ ಕೋವಿಡ್‌ ಲಸಿಕೆ ನೀಡಲಾಗಿದೆ. ಅದರಲ್ಲೂ ಹಳ್ಳಿಗಳ ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಪ್ರಿಯಾಂಕ್‌ ಖರ್ಗೆ ಕಿಡಿ ಕಾರಿದರು.

‘ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸೇನಾನಿಗಳಿಗೇ ಪೂರ್ಣ ವಾಗಿ ಲಸಿಕೆ ನೀಡಿಲ್ಲ. ಇನ್ನು ನಾಗರಿಕರಿಗೆ ಯಾವಾಗ ನೀಡುತ್ತಾರೆ? ಲಸಿಕೆ ನೀಡುವಲ್ಲಿ ರಾಜ್ಯ ಸರ್ಕಾರ ಕಲಬುರ್ಗಿ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಾಳಿದ್ದೇ ಈ ಹಿನ್ನಡೆಗೆ ಕಾರಣ. ಒಟ್ಟು 27,596 ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 22,893 ಮಂದಿಗೆ ಮಾತ್ರ ಮೊದಲ ಡೋಸ್‌ ನೀಡಲಾಗಿದೆ. 13,882 ಮಂದಿಗೆ ಎರಡನೇ ಡೋಸ್‌ ನೀಡಿದ್ದಾರೆ. ಫ್ರಂಟ್‌ಲೈನ್‌ ವಾರಿಯರ್‌ಗಳ ಸಮಸ್ಯೆ ಇನ್ನೂ ಗಂಭೀರ. ಜೂನ್‌ 16ರವರೆಗೆ ಕೇವಲ 20,590 ಮಂದಿ ನೋಂದಣಿ ಮಾಡಿಸಿದ್ದು, 18,814 ಮಂದಿಗೆ ಲಸಿಕೆ ನೀಡಲಾಗಿದೆ. ಈ ಎರಡೂ ವಿಭಾಗಗಳು ಸೇರಿ ಅರ್ಧದಷ್ಟು ಮಂದಿ ನೋಂದಣಿಯಾಗಿದೆ. ಇನ್ನೂ ಸಾವಿರಾರು ಸಂಖ್ಯೆಯ ವಾರಿಯರ್‌ಗಳು ಹಾಗೇ ಉಳಿದಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ 16 ಲಕ್ಷಕ್ಕೂ ಹೆಚ್ಚು ವಯಸ್ಕರು ಇದ್ದಾರೆ. ಇದರಲ್ಲಿ ಕೇವಲ 6,54,175 ಮಂದಿ ಮಾತ್ರ ನೋಂದಣಿ ಮಾಡಲಾಗಿದೆ. ಅವರಲ್ಲಿ 3,60,752 ಮಂದಿಗೆ ಲಸಿಕೆ ನೀಡಿದ್ದಾರೆ. ಅಂದರೆ, ನೋಂದಣಿಯಾದ ಶೇ 50ರಷ್ಟು ಮಂದಿಗೆ ಮಾತ್ರ ಲಸಿಕೆ ಸಿಕ್ಕಿದೆ. ಇವರಲ್ಲೂ ಎರಡನೇ ಡೋಸ್‌ ಪಡೆದವರು ಕೇವಲ 64,691 ಮಾತ್ರ. ಆದರೆ, ಲಸಿಕೆಯನ್ನು ಆಂದೋಲನದ ರೀತಿ ನೀಡಲಾಗುತ್ತಿದೆ ಎಂದು ಜನರ ಮುಂದೆ ಸುಳ್ಳು ಹೇಳುತ್ತಿದ್ದಾರೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ನಗರ ಘಟಕದ ಅಧ್ಯಕ್ಷ ಡಾ.ಕಿರಣ ದೇಸಾಯಿ, ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ ಇದ್ದರು.

ಅಪಾರ ಲಸಿಕೆ ವ್ಯರ್ಥ

‘ಸರಿಯಾದ ಸಮಯಕ್ಕೆ ಚುಚ್ಚುಮದ್ದು ನೀಡಲಾಗದ ಕಾರಣಕ್ಕೆ 2,207 ಕೋವ್ಯಾಕ್ಸಿನ್‌ ಹಾಗೂ 13,870 ಕೋವಿಶೀಲ್ಡ್‌ ಹಾಳಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಹಳ್ಳಿಗಳಲ್ಲಿ ಹೋಗಿ ಲಸಿಕೆ ನೀಡುವ ಯೋಗ್ಯತೆ ಇಲ್ಲದ ಇವರು, ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಾರೆ’ ಎಂದು ಮುಖಂಡ ಡಾ.ಶರಣಪ್ರಕಾಶ ಪಾಟೀಲ ಕಿಡಿ ಕಾಡಿದರು.

‘ಆರಂಭದಲ್ಲಿ ಲಸಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯೇ ನಿರ್ಲಕ್ಷ್ಯ ವಹಿಸಿದರು. ಜನಸಂಖ್ಯೆಗೆ ತಕ್ಕಂತೆ ‘ಆರ್ಡರ್‌’ ಹಾಕದ ಕಾರಣ ಇಂದು ಕೊರತೆ ಎದುರಿಸುವಂತಾಗಿದೆ. ಇದೆ ಕಾರಣಕ್ಕೆ ಹರೆಯದ ವಯಸ್ಸಿನಲ್ಲಿಯೇ ಹಲವರು ಪ್ರಾಣ ಕಳೆದುಕೊಂಡರು. ಈ ಸಾವುಗಳಿಗೆ ಪ್ರಧಾನಿ ಮೋದಿಯೇ ನೆರ ಹೊಣೆ’ ಎಂದು ಆರೋಪಿಸಿದರು.

‘ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದ ಮೇಲೆ ಉಚಿತ ಲಸಿಕೆ ನೀಡುವುದಾಗಿ ಹೇಳಿದ್ದಾರೆ. ಆದರೆ, ಬಿಜೆಪಿಯವರು ಇದನ್ನು ಕೂಡ ಮೋದಿ ಅವರ ದೊಡ್ಡತನ ಎಂದು ಪ್ರಚಾರ ಪಡೆಯುತ್ತಿರುವುದು ನಾಚಿಕೆಗೇಡು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.