ADVERTISEMENT

ಬಿಜೆಪಿ ಸರ್ಕಾರದಿಂದ ಶಿಕ್ಷಕರಿಗೆ ಶಿಕ್ಷೆ: ಕಾಂಗ್ರೆಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 15:45 IST
Last Updated 5 ಸೆಪ್ಟೆಂಬರ್ 2020, 15:45 IST
ಜಗದೇವ ಗುತ್ತೇದಾರ
ಜಗದೇವ ಗುತ್ತೇದಾರ   

ಕಲಬುರ್ಗಿ: ಕೊರೊನಾ ನೆಪದಲ್ಲಿ ರಾಜ್ಯ ಸರ್ಕಾರ ಖಾಸಗಿ ಶಾಲಾ ಶಿಕ್ಷಕರಿಗೆ ಶಿಕ್ಷೆ ನೀಡುತ್ತಿದೆ ಎಂದು ಕಾಂಗ್ರೆಸ್ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಶಾಲೆ ಆರಂಭಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಲಕ್ಷಾಂತರ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗಿದೆ. ಖಾಸಗಿ ಶಾಲೆ ಮಕ್ಕಳು ಆನ್‍ಲೈನ್ ಶಿಕ್ಷಣಪಡೆಯುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಶಾಲೆ ಶಿಕ್ಷಕರಿಗೆ ಆರು ತಿಂಗಳಿಂದ ವೇತನವಿಲ್ಲ. ಈ ಕುರಿತು ಸರ್ಕರ ಚಿಂತನೆ ಮಾಡುತ್ತಿಲ್ಲ’ ಎಂದು ಟೀಕಿಸಿದರು.

ರಾಜ್ಯದಲ್ಲಿ 49,883 ಸರ್ಕಾರಿ, 7,377 ಅನುದಾನಿತ, 18,760 ಖಾಸಗಿ ಶಾಲೆಗಳಿದ್ದು, ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕೊರತೆ ಇದೆ. ರಾಜ್ಯ ಸರ್ಕಾರದ ಶಿಕ್ಷಣದ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದರು.

ADVERTISEMENT

‘ಖಾಸಗಿ ಶಾಲೆಗಳ ಶಿಕ್ಷಕರ ಪಾಡು ಗಂಭೀರವಾಗಿದೆ. ವೇತನವಿಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ ವಾಹನಗಳ ಚಾಲಕರಿಗೂ ವೇತನ ಸಿಗುತ್ತಿಲ್ಲ. ಕೊರೊನಾ ವೈರಾಣು ನೆಪ ಮುಂದಿಟ್ಟುಕೊಂಡು ಶಾಲೆ ಆರಂಭಿಸದಿರುವುದು ಸರಿಯಲ್ಲ. ಕೊರೊನಾ ಲಾಕ್‍ಡೌನ್‍ದಿಂದ ಮಕ್ಕಳ ಪೋಷಕರು ಉದ್ಯೋಗ ಕಳೆದುಕೊಂಡಿದ್ದಾರೆ. ಶಾಲಾ ಶುಲ್ಕ ಕಟ್ಟಲೂ ಅವರ ಹತ್ತಿರ ಹಣವಿಲ್ಲ. ಖಾಸಗಿ ಶಾಲೆಗಳ ನೆರವಿಗೆ ಬರಬೇಕು. ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ನಾರಾಯಣರಾವ ಕಾಳೆ, ಈರಣ್ಣ ಝಳಕಿ, ದೇವೀಂದ್ರಪ್ಪ ಮರತೂರ, ಶಿವಕುಮಾರ ಬಾಳಿ, ಹಣಮಂತರಾವ ಜವಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.