ADVERTISEMENT

ಕೋವಿಡ್‌ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲ: ಕಾಂಗ್ರೆಸ್ ಆರೋಪ

ಜಿಲ್ಲಾ ಕಾಂಗ್ರೆಸ್‌ನಿಂದ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 6:20 IST
Last Updated 5 ಜೂನ್ 2021, 6:20 IST
ಬಿಜೆಪಿ ಸರ್ಕಾರ ವೈಫಲ್ಯಗಳನ್ನು ಖಂಡಿಸಿ ಕಲಬುರ್ಗಿಯಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗ ಮನವಿ ಸಲ್ಲಿಸಿದರು
ಬಿಜೆಪಿ ಸರ್ಕಾರ ವೈಫಲ್ಯಗಳನ್ನು ಖಂಡಿಸಿ ಕಲಬುರ್ಗಿಯಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗ ಮನವಿ ಸಲ್ಲಿಸಿದರು   

ಕಲಬುರ್ಗಿ: ಕೋವಿಡ್‌ ಸೋಂಕಿನಿಂದ ದೇಶದ ಜನರನ್ನು ರಕ್ಷಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಆದ್ದರಿಂದ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಕೋರಿ ಕಾಂಗ್ರೆಸ್‌ ಜಿಲ್ಲಾ ಘಟಕದ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಸಿದರು.

ದೇಶದ ಜನ ಕೋವಿಡ್‌ನಿಂದ ದಿನೇದಿನೇ ಸಾವಿನ ದವಡೆಗೆ ಬೀಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈಗಲೂ ಲಸಿಕೆಯನ್ನು ಹೊರ ದೇಶಗಳಿಗೆ ಮಾರಾಟ ಮಾಡುವಲ್ಲಿ ನಿರತವಾಗಿದೆ. ಈವರೆಗೆ 6.63 ಕೋಟಿ ಡೋಸ್‌ ವ್ಯಾಕ್ಸಿನ್‌ಗಳನ್ನು ವಿದೇಶಗಳಿಗೆ ಮಾರಾಟ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ದೇಶದ ಜನರ ಹಿತಕ್ಕಿಂತ ವ್ಯಾಪಾರವೇ ಮುಖ್ಯವಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

ಸದ್ಯ ನೀಡಲಾಗುವ ಚುಚ್ಚುಮದ್ದಿಗೆ ಕೆಲವೆಡೆ ₹ 150, ಖಾಸಗಿ ಆಸ್ಪತ್ರೆಗಳಲ್ಲಿ ₹ 300 ದರ ನಿಗದಿ ಮಾಡಿದ್ದಾರೆ. ಮತ್ತೆ ಕೆಲವು ಆಸ್ಪತ್ರೆಗಳು ₹ 1200 ರಿಂದ ₹ 1500 ವರೆಗೂ ಹಣ ವಸೂಲಿ ಮಾಡುತ್ತಿವೆ. ಇದು ವ್ಯಾಕ್ಸಿನ್‌ ಬ್ಲ್ಯಾಕ್‌ ಮಾರ್ಕೆಟ್‌ನಂತೆಯೇ ಇದೆ. ಒಂದೇ ದೇಶದ ಜನರಿಗೆ ಒಂದೇ ರೀತಿಯ ವ್ಯಾಕ್ಸಿನ್‌ ನೀಡುವಲ್ಲಿ ಈ ರೀತಿ ಬೇರೆಬೇರೆ ದರ ನಿಗದಿ ಮಾಡಿ ಗೊಂದಲ ಮೂಡಿಸಿದ್ದು, ಖಂಡನಾರ್ಹ ಎಂದೂ ಆರೋಪಿಸಿದ್ದಾರೆ.

ADVERTISEMENT

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕರಾದ ಡಾ.ಅಜಯ್ ಸಿಂಗ್, ಖನೀಜ್‌ ಫಾತಿಮಾ,ಮುಖಂಡರಾದ ಡಾ.ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ಶರಣಕುಮಾರ್ ಮೋದಿ, ಬಿ.ಆರ್. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.