ADVERTISEMENT

ಪ್ರಿಯಾಂಕ್‌ಗೆ ಬೆದರಿಕೆ: ಕಾಂಗ್ರೆಸ್‌ನಿಂದ ಪ್ರತಿಭಟನೆ, ಚಿತ್ತಾಪುರ ಬಂದ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:32 IST
Last Updated 17 ಅಕ್ಟೋಬರ್ 2025, 7:32 IST
ಕಲಬುರಗಿ ಜಿಲ್ಲೆಯ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಚಿತ್ತಾಪುರ ಬಂದ್ ಅಂಗವಾಗಿ ಗುರುವಾರ ಅಂಗಡಿಗಳ ಬಾಗಿಲು ತೆರೆದಿರಲಿಲ್ಲ 
ಕಲಬುರಗಿ ಜಿಲ್ಲೆಯ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಚಿತ್ತಾಪುರ ಬಂದ್ ಅಂಗವಾಗಿ ಗುರುವಾರ ಅಂಗಡಿಗಳ ಬಾಗಿಲು ತೆರೆದಿರಲಿಲ್ಲ    

ಚಿತ್ತಾಪುರ (ಕಲಬುರಗಿ ಜಿಲ್ಲೆ): ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡಿದ್ದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್‌ ಗುರುವಾರ ಕರೆ ನೀಡಿದ್ದ ಚಿತ್ತಾಪುರ ಬಂದ್ ಯಶಸ್ವಿಯಾಯಿತು.

ಬೆಳಿಗ್ಗೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದ ಲಾಡ್ಜಿಂಗ್‌ ಕ್ರಾಸಿನಲ್ಲಿ ಮಾನವ ಸರಪಳಿ ರಚಿಸಿ, ಟೈರ್‌ಗೆ ಬೆಂಕಿ ಹಚ್ಚಿ ಆರ್‌ಎಸ್‌ಎಸ್‌ ನಿಷೇಧಿಸುವಂತೆ ಆಗ್ರಹಿಸಿದರು.

ಬಳಿಕ ಚಿತಾವಲಿ ಚೌಕದಿಂದ ಲಾಡ್ಜಿಂಗ್ ಕ್ರಾಸ್‌ವರೆಗೆ ಕಾಂಗ್ರೆಸ್ ಮುಖಂಡರು, ಯುವಕರು, ಕಾರ್ಯಕರ್ತರು ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೈಯಲ್ಲಿ ಪಕ್ಷದ ಧ್ವಜ ಹಿಡಿದು, ಪ್ರಿಯಾಂಕ್‌ ಪರ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಘೋಷಣೆ ಕೂಗುತ್ತ ಬೈಕ್ ಮೇಲೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ADVERTISEMENT

ಔಷಧ ಅಂಗಡಿ, ಹಾಲಿನ ಡೇರಿ, ಪತ್ರಿಕಾ ವಿತರಣೆ ಹೊರತುಪಡಿಸಿ ಪಟ್ಟಣದಲ್ಲಿ ಎಲ್ಲಾ ತರಹದ ಅಂಗಡಿ–ಮುಂಗಟ್ಟಗಳ ವ್ಯಾಪಾರಿಗಳು ವಹಿವಾಟು ಸ್ಥಗಿತಗೊಳಿಸಿ ಬಂದ್‌ ಬೆಂಬಲಿಸಿದರು.

ಪಟ್ಟಣದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ತಾಲ್ಲೂಕಿನ ಮುಡಬೂಳ ಕ್ರಾಸ್, ಯರಗಲ್ ಕ್ರಾಸ್ ಹತ್ತಿರವೇ ವಾಹನ ಸಂಚಾರ ತಡೆಯಲಾಗಿತ್ತು. ಲಾರಿಗಳು, ಟ್ಯಾಂಕರ್ ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತವು. ಬಸ್‌ ಸಂಚಾರ ವ್ಯತ್ಯಯದಿಂದ ಪ್ರಯಾಣಿಕರು ತೀವ್ರ ಪರದಾಡಿದರು. ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಬಿಗಿ ‍ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕಲಬುರಗಿಯಲ್ಲಿ ಪ್ರತಿಭಟನೆ: ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಕಲಬುರಗಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಚಿತ್ತಾಪುರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ನೇತೃತ್ವದಲ್ಲಿ ಗುರುವಾರ ಚಿತ್ತಾಪುರ ಬಂದ್ ನಡೆಸಿ ಕಾರ್ಯಕರ್ತರು ಲಾಡ್ಜಿಂಗ್ ಕ್ರಾಸಿನಲ್ಲಿ ಪ್ರತಿಭಟನೆ ನಡೆಸಿದರು

ಕೀಟನಾಶಕ ಸೇವಿಸಿದ ಕಾರ್ಯಕರ್ತ

ಲಾಡ್ಜಿಂಗ್ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾಬಣ್ಣಾ ಭರಾಟೆ ಅವರು ಕೀಟನಾಶಕ ಸೇವಿಸಿ ಆಕ್ರೋಶ ಭರಿತರಾಗಿ ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.