ರಾಜಕುಮಾರ ಪಾಟೀಲ ತೇಲ್ಕೂರ
ಕಲಬುರಗಿ: ‘ಕಾಗಿಣಾ ನದಿ ವ್ಯಾಪ್ತಿಯ ಭಾಗೋಡಿ ಮತ್ತಿತರ ಪ್ರದೇಶದಲ್ಲಿನ ಅಕ್ರಮ ಮರಳುಗಾರಿಕೆ ತನಿಖೆಗೆ ಶುಕ್ರವಾರ ಆಗಮಿಸಿರುವ ಹಿರಿಯ ಭೂ ವಿಜ್ಞಾನಿಗಳ ತಂಡದ ತನಿಖೆಯ ಹಾದಿಯನ್ನು ತಪ್ಪಿಸಲು ವ್ಯವಸ್ಥಿತ ಸಂಚು ನಡೆದಿದೆ’ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆರೋಪಿಸಿದ್ದಾರೆ.
‘ಕೆಆರ್‌ಡಿಎಲ್ ಸಂಸ್ಥೆ ಮರಳು ಪೂರೈಕೆಯನ್ನು ಖಾಸಗಿ ಒಡೆತನ ವ್ಯಕ್ತಿಗಳಿಗೆ ನೀಡಿದ್ದರಿಂದ 40 ಎಕರೆ ಬದಲು 250–300 ಎಕರೆ ಪ್ರದೇಶದಲ್ಲಿ ಮರಳುಗಾರಿಕೆ ಮಾಡಲಾಗಿದೆ. 30 ರಿಂದ 40 ಲಕ್ಷ ಟನ್ ಮರಳುಗಾರಿಕೆ ಮಾಡಿ ಸರ್ಕಾರಕ್ಕೆ ರಾಜಧನ ಕಟ್ಟದೇ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.
‘ಅಕ್ರಮದ ತನಿಖೆಗೆ ಆಗಮಿಸಿದ ಬಳ್ಳಾರಿಯ ಹಿರಿಯ ಭೂವಿಜ್ಞಾನಿಗಳಾದ ಪ್ರವೀಣ ಜೋಶಿ, ಮಂಜುನಾಥ ಅವರನ್ನೊಳಗೊಂಡ ತಂಡ ಭಾಗೋಡಿಗೆ ಹೋದಾಗ ಖಾಸಗಿ ಪಟ್ಟಾ ಭೂಮಿಯಲ್ಲಿನ ಮರಳುಗಾರಿಕೆಯನ್ನು ಮಾತ್ರ ತೋರಿಸಲಾಗಿದೆ. ಕೆಆರ್‌ಡಿಎಲ್ ರಾಶಿಗಟ್ಟಲೇ ಗುಡ್ಡೆ ಹಾಕಿರುವ ಮರಳು ಇರುವ ಪ್ರದೇಶಕ್ಕೆ ಹೋಗದಂತೆ ದಾರಿಯನ್ನು ವಿರೂಪಗೊಳಿಸಲಾಗಿದೆ’ ಎಂದು ಆಪಾದಿಸಿದ್ದಾರೆ.
‘ಅಕ್ರಮ ಮರಳುಗಾರಿಕೆ ದಂಧೆಯ ತನಿಖೆಗೆ ಆಗಮಿಸಿದ ತಂಡಕ್ಕೆ ಜಿಲ್ಲಾಧಿಕಾರಿ ಶನಿವಾರ (ಮೇ 17) ದಿನವಾದರೂ ಸೂಕ್ತ ಪೊಲೀಸ್ ರಕ್ಷಣೆ ನೀಡಿ, ಜತೆಗೆ ಮಾಧ್ಯಮದವರ ಸಮ್ಮುಖದಲ್ಲಿ ತನಿಖೆ ನಡೆದು ಸತ್ಯಾಸತ್ಯತೆ ಹೊರ ತರಲು ಕ್ರಮ ಕೈಗೊಳ್ಳಬೇಕು. ಇಡೀ ಅಕ್ರಮ ಬಯಲಿಗೆ ಬರಬೇಕಾದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.