ಕಲಬುರಗಿ: ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಯಾದ ‘ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ’ಗೆ ಜೆಸ್ಕಾಂ ವ್ಯಾಪ್ತಿಯಲ್ಲಿ ಅರ್ಜಿಗಳ ಸಲ್ಲಿಕೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದರೂ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳುವಲ್ಲಿ ಗ್ರಾಹಕರು ನಿರಾಸಕ್ತಿ ತೋರುತ್ತಿದ್ದಾರೆ.
ಫೆಬ್ರುವರಿ 29ರಂದು ಈ ಯೋಜನೆಗೆ ಚಾಲನೆ ದೊರಕಿದ್ದು, 10 ತಿಂಗಳ ಅವಧಿಯಲ್ಲಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 7,083 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಇದರಲ್ಲಿ 244 ಜನರು ಮಾತ್ರ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಯಾದಗಿರಿಯಲ್ಲಿ ಅತಿ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ 2,336, ರಾಯಚೂರು ಜಿಲ್ಲೆಯಲ್ಲಿ 1,866, ಕಲಬುರಗಿಯಲ್ಲಿ 1,067, ಬಳ್ಳಾರಿಯಲ್ಲಿ 776, ವಿಜಯನಗರದಲ್ಲಿ 436, ಬೀದರ್ ಜಿಲ್ಲೆಯಲ್ಲಿ 376, ಯಾದಗಿರಿ ಜಿಲ್ಲೆಯಲ್ಲಿ 274 ಅರ್ಜಿಗಳು ಸಲ್ಲಿಕೆಯಾಗಿವೆ.
ಏನಿದು ಸೂರ್ಯಘರ್ ಯೋಜನೆ?: ಗ್ರಾಹಕರು ತಮ್ಮ ಮನೆಯ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಿ ಮನೆಗೆ ಬಳಕೆ ಮಾಡಬಹುದು. ಹೆಚ್ಚಿನ ವಿದ್ಯುತ್ ಲಭ್ಯವಿದ್ದರೆ ಜೆಸ್ಕಾಂಗೆ ಮಾರಾಟ ಮಾಡಬಹುದು.
ಸೋಲಾರ್ ಪ್ಯಾನಲ್ ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಸಹಾಯಧನ ನೀಡುತ್ತಿದೆ. ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ ₹30 ಸಾವಿರ, ಎರಡು ಕಿಲೊ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ ₹60 ಸಾವಿರ ಹಾಗೂ ಮೂರು ಕಿಲೋ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲು ಗರಿಷ್ಠ ₹78 ಸಾವಿರ ಸಹಾಯಧವನ್ನು ಸರ್ಕಾರ ನೀಡಲಿದೆ. ಸರ್ಕಾರ ನೀಡುವ ಸಹಾಯಧನ ಹಾಗೂ ಗ್ರಾಹಕರ ವಂತಿಗೆ ಆಧಾರದ ಮೇಲೆ ಗ್ರಾಹಕರು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಒಂದು ಕಿಲೊ ವ್ಯಾಟ್ ಸಾಮರ್ಥ್ಯದ ಘಟಕದಿಂದ ಪ್ರತಿ ಯುನಿಟ್‌ಗೆ ₹2.25, ಎರಡು ಕಿಲೋ ವ್ಯಾಟ್ ಸಾಮರ್ಥ್ಯದ ಘಟಕದ ಪ್ರತಿ ಯುನಿಟ್‌ಗೆ ₹2.43, ಮೂರು ಕಿಲೊ ವ್ಯಾಟ್ ಸಾಮರ್ಥ್ಯ ಘಟಕದ ಪ್ರತಿ ಯುನಿಟ್‌ಗೆ ₹2.62ರಂತೆ ದರದಲ್ಲಿ ಜೆಸ್ಕಾಂ ವಿದ್ಯುತ್ ಖರೀದಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ: ಸೌರ ವಿದ್ಯುತ್ ಹೆಚ್ಚಳ ಹಾಗೂ ಸ್ವಂತ ವಿದ್ಯುತ್ ಉತ್ಪಾದಿಸಲು ವಸತಿ ಮನೆಗಳಿಗೆ ಅಧಿಕಾರ ನೀಡಲು ಫೆ.29ರಂದು ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಕಾರ್ಯಕ್ರಮ ಅನುಷ್ಠಾನ ಸಂಸ್ಥೆ ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯ ಅನುಷ್ಠಾನ ಏಜೆನ್ಸಿಗೆ ನೀಡಲಾಗಿದೆ.
‘ಸೂರ್ಯಘರ್’ ಬಗ್ಗೆ ಹೆಚ್ಚಿನ ಜಾಗೃತಿ’
‘ಗ್ರೀನ್ ಎನರ್ಜಿ ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ಬಂದ ಸೂರ್ಯಘರ್ ಯೋಜನೆ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದ್ದು ಗೃಹ ಜ್ಯೋತಿಯಿಂದಾಗಿ ಹೆಚ್ಚಿನ ಜನ ಆಸಕ್ತಿ ತೋರುತ್ತಿಲ್ಲ’ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಒಂದು ಸೋಲಾರ್ ಪ್ಯಾನಲ್ ಹಾಕಿಕೊಂಡರೆ 25 ವರ್ಷಗಳ ಕಾಲ ವಿದ್ಯುತ್ ಹಣ ಪಾವತಿ ಅವಶ್ಯಕತೆ ಇರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಲಭ್ಯವಿದ್ದರೆ ಅವರು ಜೆಸ್ಕಾಂಗೆ ಮಾರಾಟವನ್ನು ಮಾಡಬಹುದು’ ಎಂದು ಹೇಳಿದರು. ‘ಗ್ರಾಹಕರು ಗೃಹಜ್ಯೋತಿ ಮಾದರಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಸುಮ್ಮನಾಗುತ್ತಿದ್ದಾರೆ. ಗ್ರಾಹಕರು ಅರ್ಜಿ ಸಲ್ಲಿಸಿ ವೆಂಡರ್ ಆಯ್ಕೆ ಮಾಡಿಕೊಳ್ಳಬೇಕು. ತಮ್ಮ ಮನೆಗೆ ಬಂದು ಸೋಲಾರ್ ಪ್ಯಾನಲ್ ಅಳವಡಿಸಿದಾಗ ಹಣ ಪಾವತಿ ಮಾಡಬಹುದು. ಹಣಕಾಸಿನ ಸಮಸ್ಯೆಯಿದ್ದರೆ ಬ್ಯಾಂಕ್‌ನಿಂದ ಸಾಲ ಸಹ ಪಡೆಯಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.