ADVERTISEMENT

ಕಲಬುರಗಿ | ವಿದ್ಯುತ್ ದರ ಪರಿಷ್ಕರಣೆಗೆ ತೀವ್ರ ವಿರೋಧ

ಗ್ರಾಹಕರ ಅಹವಾಲು ಆಲಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 16:30 IST
Last Updated 20 ಫೆಬ್ರುವರಿ 2023, 16:30 IST
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿದರು. ಸದಸ್ಯರಾದ ಎಚ್‌.ಎಂ. ಮಂಜುನಾಥ, ಎಂ.ಡಿ. ರವಿ ಇದ್ದರು
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿದರು. ಸದಸ್ಯರಾದ ಎಚ್‌.ಎಂ. ಮಂಜುನಾಥ, ಎಂ.ಡಿ. ರವಿ ಇದ್ದರು   

ಕಲಬುರಗಿ: ಕೋವಿಡ್‌ ಹಾವಳಿಯಿಂದಾಗಿ ಬಹುತೇಕ ಜನರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಆರ್ಥಿಕ ಚಟುವಟಿಕೆಗಳು ಇಲ್ಲದೇ ಇರುವುದರಿಂದ ಬಹುತೇಕ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ದರ ಪರಿಷ್ಕರಣೆ ಮಾಡಬಾರದು ಎಂದು ಗ್ರಾಹಕರು ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ವಿವಿಧ ಗ್ರಾಹಕ ವೇದಿಕೆಗಳ ಮುಖಂಡರು ಹಾಗೂ ಗ್ರಾಹಕರು, ‘ಜೆಸ್ಕಾಂ ಅನಗತ್ಯವಾಗಿ ಮಾಡುತ್ತಿರುವ ಕೆಲವು ಖರ್ಚುಗಳನ್ನು ತಗ್ಗಿಸಿದರೆ ಹಾಗೂ ಸರ್ಕಾರಿ ಸಂಸ್ಥೆಗಳು ತಮ್ಮ ಬಿಲ್‌ನ ಬಾಕಿ ತಕ್ಷಣ ಪಾವತಿಸಿದರೆ ಬೆಲೆ ಪರಿಷ್ಕರಣೆಯನ್ನು ತಡೆಯಬಹುದು’ ಎಂದು ಸಲಹೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ದೀಪಕ್ ಗಾಲಾ ಮಾತನಾಡಿ, ‘ರಾಜ್ಯದ ವಿವಿಧ ಥರ್ಮಲ್ ವಿದ್ಯುತ್ ಸ್ಥಾವರಗಳೊಂದಿಗೆ ಜೆಸ್ಕಾಂ ₹ 273.65 ಕೋಟಿ ನಿರ್ದಿಷ್ಟ ಮೊತ್ತ ಪಾವತಿಸುವ ಒಪ್ಪಂದ ಮಾಡಿಕೊಂಡಿದ್ದು, 2,446 ಮೆಗಾವಾಟ್ ವಿದ್ಯುತ್ ಖರೀದಿಸಬೇಕಿತ್ತು. ಆದರೆ, ಕೇವಲ 1201 ಮೆಗಾವಾಟ್ ವಿದ್ಯುತ್ ಮಾತ್ರ ಖರೀದಿಸಲಾಗಿದೆ. ಅನಿಮಿಯಮಿತ ವಿದ್ಯುತ್ ಕಡಿತದಿಂದ ಬೇಸತ್ತಿರುವ ವಿವಿಧ ಕೈಗಾರಿಕೆಗಳು ಸ್ವಂತ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಮುಂದಾಗುತ್ತಿವೆ. ಆದ್ದರಿಂದ ಗುಣಮಟ್ಟದ ಹಾಗೂ ನಿಯಮಿತ ವಿದ್ಯುತ್ ಕೊಡಲು ಕ್ರಮ ಕೈಗೊಂಡರೆ ಜೆಸ್ಕಾಂನಿಂದ ಪೂರೈಸುವ ವಿದ್ಯುತ್ ಬಳಸುತ್ತಾರೆ. ಕೈಗಾರಿಕೆಗಳ ಮುಖ್ಯಸ್ಥರ ಮನವೊಲಿಸಿ ಹೆಚ್ಚು ವಿದ್ಯುತ್ ಮಾರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅನಗತ್ಯವಾಗಿ ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ನಿಶ್ಚಿತ ಮೊತ್ತ ಪಾವತಿಸುವ ಒಪ್ಪಂದಗಳನ್ನು ಮಾಡಿಕೊಳ್ಳಬಾರದು’ ಎಂದರು.

ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್ ಸಜ್ಜಾದ್ ಅಲಿ ಇನಾಮದಾರ ಮಾತನಾಡಿ, ‘ಜೆಸ್ಕಾಂ ಅನಧಿಕೃತ ಲೇಔಟ್‌ಗಳಲ್ಲಿ ವಿದ್ಯುತ್ ಸಂಪರ್ಕ ನೀಡಲು ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ತಾನು ಖರ್ಚು ಮಾಡಿದ್ದಕ್ಕಿಂತ ದುಪ್ಪಟ್ಟು ಹಣವನ್ನು ವಸೂಲಿ ಮಾಡಿದೆ. ಅದನ್ನು ಗ್ರಾಹಕರಿಗೆ ಮರಳಿಸಬೇಕು. ಬ್ರಹ್ಮಪುರ ಬಡಾವಣೆಯ 125ನೇ ಸರ್ವೆ ನಂಬರ್‌ನಲ್ಲಿ 875 ನಿವೇಶನಗಳಿದ್ದು, ಪ್ರತಿ ಬಾರಿ ವಿದ್ಯುತ್ ಸಂಪರ್ಕ ಶುಲ್ಕ ಪಡೆಯಲು ಅಭಿವೃದ್ಧಿ ಶುಲ್ಕವಾಗಿ ₹ 50 ಸಾವಿರ ಪಡೆಯಲಾಗಿದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್, 100 ಕೆ.ವಿ. ಹಾಗೂ 25 ಕೆ.ವಿ. ಸಾಮರ್ಥ್ಯದ ಘಟಕ ಅಳವಡಿಕೆ ಸೇರಿದಂತೆ ಒಟ್ಟಾರೆ ₹ 3.87 ಕೋಟಿ ವಸೂಲಿ ಮಾಡಲಾಗಿದೆ. ನಿಗದಿತ ಮೊತ್ತಕ್ಕಿಂತ ₹ 1.60 ಕೋಟಿಯನ್ನು ಹೆಚ್ಚುವರಿಯಾಗಿ ಪಡೆದಿದ್ದು, ಇದು ಜೆಸ್ಕಾಂನ ಹಗಲು ದರೋಡೆಯಲ್ಲವೇ’ ಎಂದು ಪ್ರಶ್ನಿಸಿದರು.

‘ಒಂದೇ ನಿವೇಶನದಲ್ಲಿ ಪ್ರತ್ಯೇಕ ಮೀಟರ್ ಅಳವಡಿಸಲು ₹ 50 ಸಾವಿರ ಪಡೆಯುತ್ತಾರೆ. ಹೀಗೆ ನಾಲ್ಕು ಮೀಟರ್ ಅಳವಡಿಸಿದ್ದಕ್ಕೆ ನಮ್ಮ ಕುಟುಂಬ ₹ 2 ಲಕ್ಷ ಪಾವತಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಬಗ್ಗೆ ಅಗತ್ಯ ತಿದ್ದುಪಡಿ ತರಲಾಗುವುದು. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವಿಭಾಗ ಅಧ್ಯಕ್ಷ ಚನ್ನಬಸಯ್ಯ ನಂದಿಕೋಲ ಮಾತನಾಡಿ, ‘ಈಗಾಗಲೇ ಕೋವಿಡ್ ಹಾಗೂ ಜಿಎಸ್‌ಟಿ ಭಾರದಿಂದ ಸಣ್ಣ ಕೈಗಾರಿಕೆಗಳು ನಲುಗಿ ಹೋಗಿವೆ. ಇಂತಹ ವೇಳೆ ವಿದ್ಯುತ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದ ಅನುಭವ ನೀಡುತ್ತದೆ. ಆದ್ದರಿಂದ ಸದ್ಯದ ಸ್ಥಿತಿಯಲ್ಲಿ ಬೆಲೆ ಹೆಚ್ಚಳಕ್ಕೆ ಅನುವು ಮಾಡಿಕೊಡಬಾರದು. ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ಹೋದಾಗ ತಕ್ಷಣ ಕೆಲಸ ಮಾಡಲು ಲೈನ್‌ಮನ್‌ಗಳಿಲ್ಲ. ಇರುವ ಕೆಲವರು ವಯಸ್ಸಾದವರಿದ್ದಾರೆ. ವಿದ್ಯುತ್ ತುರ್ತು ಕೆಲಸಕ್ಕಾಗಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಬೇಕು’ ಎಂದು ಮನವಿ ಮಾಡಿದರು.

ನಿರಂಜನ, ಶರಣ ಐ.ಟಿ., ಉಮಾಪತಿ, ಬಾಬು ಹೇರೂರ ಇತರರು ಪ್ರಶ್ನೆಗಳನ್ನು ಕೇಳಿದರು.

ಆಯೋಗದ ಅಧ್ಯಕ್ಷ ಪಿ. ರವಿಕುಮಾರ್, ಸದಸ್ಯರಾದ ಎಚ್‌.ಎಂ. ಮಂಜುನಾಥ, ಎಂ.ಡಿ. ರವಿ ವೇದಿಕೆಯಲ್ಲಿದ್ದರು.

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಆಯೋಗದ ನಿರ್ದೇಶಕ (ತಾಂತ್ರಿಕ), ಉಪನಿರ್ದೇಶಕ (ಇಂಧನ) ಶಂಕರ್ ಸುಂದರ್, ಜೆಸ್ಕಾಂ ಮುಖ್ಯ ಎಂಜಿನಿಯರ್, ಪ್ರಧಾನ ವ್ಯವಸ್ಥಾಪಕರು, ಸೂಪರಿಂಟೆಂಡಿಂಗ್ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಇದ್ದರು.

‘ಅಪಾಯಕಾರಿ ಕಂಬಗಳನ್ನು ಸ್ಥಳಾಂತರಿಸಿ’

ಸಾರ್ವಜನಿಕ ಪ್ರದೇಶಗಳಲ್ಲಿ ಅಪಾಯಕಾರಿಯಾಗಿ ನಿಂತಿರುವ ವಿದ್ಯುತ್ ಕಂಬ ಹಾಗೂ ಟಿ.ಸಿ.ಗಳನ್ನು ಸ್ಥಳಾಂತರಿಸಿ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಅವರಿಗೆ ನಿರ್ದೇಶನ ನೀಡಿದರು.

ಸಿದ್ದರಾಮಯ್ಯ ಹಿರೇಮಠ ಎಂಬುವವರು ಕೇಳಿದ ‍ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

‘ಜೆಸ್ಕಾಂ ಅಂತಹ ಸ್ಥಳಗಳನ್ನು ಗುರುತಿಸಿ ಸ್ಥಳಾಂತರ ಪ್ರಕ್ರಿಯೆ ನಡೆಸುತ್ತಿದೆ. ಮೊದಲು ಶಾಲೆ ಹಾಗೂ ಹಾಸ್ಟೆಲ್‌ ಸಮೀಪದ ಕಂಬ ಹಾಗೂ ಟಿ.ಸಿ.ಗಳನ್ನು ಸ್ಥಳಾಂತರಿಸಲಾಗುತ್ತಿದೆ’ ಎಂದು ರಾಹುಲ್ ಪಾಂಡ್ವೆ ಮಾಹಿತಿ ನೀಡಿದರು.

***

ಹೆಸ್ಕಾಂ ಹೊರತುಪಡಿಸಿ ಉಳಿದ ಮೂರು ಕಡೆ ದರ ಪರಿಷ್ಕರಣೆ ಕುರಿತಂತೆ ಗ್ರಾಹಕರ ಅಹವಾಲು ಸ್ವೀಕರಿಸಲಾಗಿದೆ. ಎಲ್ಲವನ್ನೂ ಪರಿಶೀಲಿಸಿ ದರ ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು
–ಪಿ. ರವಿಕುಮಾರ್, ಅಧ್ಯಕ್ಷ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ

***

ಜೆಸ್ಕಾಂ ತಡೆರಹಿತ ವಿದ್ಯುತ್ ಕೊಡದೇ ಇರುವುದರಿಂದ ದಾಲ್‌ ಮಿಲ್‌ಗಳು ಮುಚ್ಚುತ್ತಿವೆ. ಇದರಿಂದಾಗಿ ದಾಲ್ ಮಿಲ್ ನಡೆಸುತ್ತಿರುವವರಿಗೆ ಕನ್ಯೆ ಕೊಡದಂತಹ ಪರಿಸ್ಥಿತಿ ಎದುರಾಗಿದೆ
–ಅಮರನಾಥ ಪಾಟೀಲ, ರಾಷ್ಟ್ರೀಯ ಕೈಗಾರಿಕಾ ಮತ್ತು ವಾಣಿಜ್ಯ ಸಮಿತಿ ಅಧ್ಯಕ್ಷ

***

ಏದುಸಿರುವ ಬಿಡುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉಳಿಸಲು ಜೆಸ್ಕಾಂ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಸಬೇಕೇ ಹೊರತು ದರ ಪರಿಷ್ಕರಣೆ ಮಾಡಬಾರದು
–ಭೀಮಾಶಂಕರ ಬಿ. ಪಾಟೀಲ, ಕಾಸಿಯಾ ಜಂಟಿ ಕಾರ್ಯದರ್ಶಿ

***

ಕೋವಿಡ್‌ನಿಂದ ಬೇಸತ್ತಿರುವ ಗ್ರಾಹಕರಿಗೆ ಯಾವುದೇ ರೀತಿಯ ಬೆಲೆ ಹೆಚ್ಚಳವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ದರ ಪರಿಷ್ಕರಣೆ ಕೈಬಿಡಬೇಕು. ವಿದ್ಯುತ್‌ ಸರಬರಾಜು ಕಂಪನಿಗಳ ಖಾಸಗೀಕರಣ ನಿಲ್ಲಿಸಬೇಕು
–ಎಸ್‌.ಎಂ. ಶರ್ಮಾ, ಕರ್ನಾಟಕ ವಿದ್ಯುತ್ ಗ್ರಾಹಕರ ಸಂಘದ ಸದಸ್ಯ

***

ಮುದ್ರಣ ಕಾಗದಕ್ಕೆ ವಿಪರೀತ ಜಿಎಸ್‌ಟಿ ಹಾಗೂ ಆಮದು ಸುಂಕ ವಿಧಿಸಿದ್ದರಿಂದ ಮುದ್ರಣ ಮಾಧ್ಯಮ ಸಂಕಷ್ಟದಲ್ಲಿದ್ದು, ಪತ್ರಿಕಾ ಮುದ್ರಣಾಲಯಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಸಲು ಎಸ್ಕಾಂಗಳಿಗೆ ಸೂಚಿಸಬೇಕು
–ಬಾಬುರಾವ ಯಡ್ರಾಮಿ, ಜಿಲ್ಲಾ ಅಧ್ಯಕ್ಷ, ಕಾರ್ಯನಿರತ ಪತ್ರಕರ್ತರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.