ADVERTISEMENT

ಕಲಬುರ್ಗಿ: ಸಾಮಾನು, ಸರಂಜಾಮಿಗೆ 2 ರೈಲು: 25ರವರೆಗೆ ಓಡಾಟ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 11:31 IST
Last Updated 14 ಏಪ್ರಿಲ್ 2020, 11:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ದೈನಂದಿನ ಅಗತ್ಯ ವಸ್ತುಗಳ ಕೊರತೆ ನೀಗಿಸಲು ಹಾಗೂ ದಿನಸಿ ಸರಬರಾಜು ಮಾಡುವ ಉದ್ದೇಶದಿಂದ ಮುಂಬೈ– ವಾಡಿ ಹಾಗೂ ಮುಂಬೈ– ಚೆನ್ನೈ ಮಧ್ಯೆ ಏ. 8ರಿಂದ ಆರಂಭಿಸಿದ ‘ಕೋವಿಡ್‌–19’ ವಿಶೇಷ ರೈಲುಗಳು ಸಂಚಾರವನ್ನು ಏ. 25ರವರೆಗೂ ಓಡಿಸಲಾಗುತ್ತಿದೆ.

ಈ ಮುಂಚೆ ಇವುಗಳನ್ನು ಏ. 14ರವರೆಗೆ ಮಾತ್ರ ಓಡಿಸಲು ನಿರ್ಧರಿಸಲಾಗಿತ್ತು. ದೇಶದಲ್ಲಿ ಲಾಕ್‌ಡೌನ್‌ ಮುಂದುವರಿದ ಕಾರಣ, ಏ.25ರವರೆಗೂ ಪ್ರತಿ ದಿನ ಈ ವಿಶೇಷ ರೈಲುಗಳು ಓಡಾಡಲಿವೆ.

ಪ್ರತಿ ದಿನ ಮಧ್ಯಾಹ್ನ 3.30ಕ್ಕೆ ಮುಂಬೈನಿಂದ ಹೊರಡುವ ಒಂದು ರೈಲು ರಾತ್ರಿ 12ಕ್ಕೆ ವಾಡಿ ನಿಲ್ದಾಣ ತಲುಪಲಿದೆ. ಅದೇ ರೀತಿ, ಮರುದಿನ ರಾತ್ರಿ 2.30ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ ಮುಂಬೈ ತಲುಪಲಿದೆ.

ADVERTISEMENT

ಇನ್ನೊಂದು ಮಾರ್ಗದಲ್ಲಿ ಪ್ರತಿ ದಿನ ಸಂಜೆ 7.35ಕ್ಕೆ ಮುಂಬೈನಿಂದ ಹೊರಡುವ ಈ ವಿಶೇಷ ರೈಲು ಮಾರನೇ ದಿನ ಸಂಜೆ 6.35ಕ್ಕೆ ಚೆನ್ನೈ ತಲುಪಲಿದೆ. ಅದೇ ದಿನ ಬೆಳಿಗ್ಗೆ 10ಕ್ಕೆ ಚೆನ್ನೈನಿಂದ ಮರಳಿ ಹೊರಟು ರಾತ್ರಿ 8.45ಕ್ಕೆ ಮುಂಬೈ ಸೇರಲಿದೆ.

ಈ ರೈಲುಗಳು ಮಾರ್ಗಮಧ್ಯದಲ್ಲಿ ಬರುವಕಲ್ಯಾಣ, ಲೋನವಾಲಾ, ಪುಣೆ, ದೌಂಡ, ಕುರ್ದುವಾಡಿ, ಸೊಲ್ಲಾಪುರ, ಕಲಬುರ್ಗಿಯಲ್ಲಿ ನಿಂತು ವಾಡಿ ತಲುಪಲಿದೆ. ಇದೇ ಮಾರ್ಗದಲ್ಲಿ ಮರಳಲಿದೆ.

ಎಲ್ಲ ನಿಲ್ದಾಣಗಳಲ್ಲೂ ಈ ವಿಶೇಷ ರೈಲು ನಿಲುಗಡೆಯಾಗಲಿದೆ. ಈ ಹಿಂದೆಯೇ ಸಾಮಾನು, ಸರಂಜಾಮು, ಅಗತ್ಯ ವಸ್ತುಗಳು, ದಿನಸಿ, ವಾಹನ, ಗೃಹೋಪಯೋಗಿ ವಸ್ತುಗಳನ್ನು ಸಾಗಿಸಲು ಬುಕ್‌ ಮಾಡಿದ್ದರ ಪರಿಣಾಮ ಈ ರೈಲುಗಳನ್ನು ನಿಗದಿತ ಅವಧಿಯಲ್ಲಿ ಮಾತ್ರ ಓಡಿಸಲಾಗುತ್ತಿದೆ. ಇದಲ್ಲದೇ, ಪ್ರತಿದಿನ ಸಂಚರಿಸುವ ಸರಕು ಸಾಗಣೆ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.