ADVERTISEMENT

ಸಂಬಂಧಿಕರ ಮನೆಯಲ್ಲಿ 10 ದಿನ ತಂಗಿದ್ದ ಕೊರೊನಾ ವೈರಸ್ ಶಂಕಿತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:00 IST
Last Updated 5 ಏಪ್ರಿಲ್ 2020, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಡಿ (ಕಲಬುರ್ಗಿ): ದೆಹಲಿಯ ನಿಜಾಮುದ್ದೀನ್‌ ಆವರಣದ ಮಸೀದಿಯಲ್ಲಿ ನಡೆದ ಮುಸ್ಲಿಂ ಧರ್ಮ ಪ್ರಚಾರಕರ ಸಮಾವೇಶದಲ್ಲಿ ಭಾಗವಹಿಸಿದ್ದ ಕೊರೊನಾ ಶಂಕಿತ ವ್ಯಕ್ತಿಯೊಬ್ಬರ ಟ್ರಾವೆಲಿಂಗ್ ಹಿಸ್ಟರಿಯಲ್ಲಿ ಪಟ್ಟಣದ ಹೆಸರು ಸೇರ್ಪಡೆಯಾಗಿದ್ದು, ಪಟ್ಟಣದಲ್ಲಿ ಆತಂಕ ಶುರುವಾಗಿದೆ.

ತೆಲಂಗಾಣ ಮೂಲದ ವ್ಯಕ್ತಿ ನೇರವಾಗಿ ವಾಡಿಗೆ ಬಂದು ಇಲ್ಲಿಯೇ ಸಂಬಂಧಿಕರ ಮನೆಯಲ್ಲಿ 10 ದಿನ ತಂಗಿದ್ದ ಎಂಬ ಸಂಗತಿ ಈಗ ಬಯಲಿಗೆ ಬಂದಿದೆ.

ನೆರೆಯ ತೆಲಂಗಾಣ ಪೊಲೀಸರ ಸೂಚನೆ ಮೇರೆಗೆ ತಾಲ್ಲೂಕು ವೈದ್ಯಾಧಿಕಾರಿ ಡಾ. ಸುರೇಶ ಮೇಕಿನ ನೇತೃತ್ವದ ತಂಡ ಭಾನುವಾರ ಕೊರೊನಾ ಶಂಕಿತ ವ್ಯಕ್ತಿ ತಂಗಿದ್ದ ಮನೆಗೆ ಭೇಟಿ ನೀಡಿ ಪರಿಶೀಲಿಸಿದೆ. ಶಂಕಿತ ವ್ಯಕ್ತಿ ತಂಗಿದ್ದ ಮನೆಯ ಮೂವರಿಗೂ ಪಕ್ಕದ ಮನೆಯ ಮೂವರಿಗೂ ಹಾಗೂ ಶಂಕಿತನನ್ನು ತಾಂಡೂರುವರೆಗೂ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಕಾರು ಚಾಲಕನನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ. ಅವರ ಮೇಲೆ ತೀವ್ರ ನಿಗಾ ಇಟ್ಟು ಆರೋಗ್ಯದಲ್ಲಿನ ಏರುಪೇರು ಗಮನಿಸಿ ವರದಿ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವೈದ್ಯಾಧಿಕಾರಿ ಡಾ. ಸುರೇಶ ಮೇಕಿನ್ ‘ಕೊರೊನಾ ಶಂಕಿತ ವ್ಯಕ್ತಿಯ ಟ್ರಾವೆಲಿಂಗ್ ಹಿಸ್ಟರಿಯಲ್ಲಿ ಆತ ವಾಡಿಯಲ್ಲಿ ಬಂದು 10 ದಿನ ತಂಗಿದ್ದ ಎಂಬ ಮಾಹಿತಿ ಬಂದಿದ್ದು, ಅದಕ್ಕಾಗಿ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವವರ ಆರೋಗ್ಯದ ಮೇಲೆ ವಿಶೇಷ ನಿಗಾ ಇಡಲಿದ್ದೇವೆ. ವರದಿ ಎರಡು ದಿನಗಳಲ್ಲಿ ಬರಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.