ಕಲಬುರಗಿ: ಏಳನೇ ವೇತನ ಆಯೋಗದ ಸೌಲಭ್ಯಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರಿಗೂ ಆರ್ಥಿಕ ಇಲಾಖೆಯಿಂದಲೇ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಲಬುರಗಿ ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ.
ನೌಕರರ ಪ್ರತಿಭಟನೆ ಬೆಂಬಲಿಸಿ ಗುರುವಾರ ಮಾಜಿ ಶಾಸಕ, ಬಿಜೆಪಿಯ ದತ್ತಾತ್ರೇಯ ಪಾಟೀಲ ರೇವೂರ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಚಂದು ಪಾಟೀಲ ಹಾಗೂ ಪಾಲಿಕೆಯ ಬಿಜೆಪಿ ಸದಸ್ಯರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಪ್ರಕಟಿಸಬೇಕು. ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆಜಿಐಡಿ, ಜಿಪಿಎಫ್ ಸೌಲಭ್ಯವನ್ನು ಎಲ್ಲಾ ಮಹಾನಗರ ಪಾಲಿಕೆಗಳ ಅಧಿಕಾರಿಗಳು, ನೌಕರರಿಗೆ ವಿಸ್ತರಿಸಬೇಕು. ಆರೋಗ್ಯ ಸಂಜೀವಿನಿ ಯೋಜನೆಯನ್ನು ಪಾಲಿಕೆ ಅಧಿಕಾರಿ, ನೌಕರರಿಗೂ ವಿಸ್ತರಿಸಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಆಯೋಜಿಸುವ ರಾಜ್ಯ ಮಟ್ಟದ ಕ್ರೀಡೆಯನ್ನು ಪಾಲಿಕೆಯ ಸಿಬ್ಬಂದಿಗೂ ಆಯೋಜಿಸಬೇಕು. ಹಲವು ವರ್ಷಗಳಿಂದ ಮುಂಬಡ್ತಿ ವಂಚಿತವಾಗಿರುವ ಪಾಲಿಕೆ ನೌಕರರಿಗೆ ವೃಂದವಾರು ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ವೀರಣ್ಣ ಹೊನ್ನಳ್ಳಿ, ರಾಜು ಉದನೂರ, ಸಂಘದ ಅಧ್ಯಕ್ಷ ರಾಜು ಕಟ್ಟಿಮನಿ, ಶ್ರೀಶೈಲ ಕಂಬದ, ಬಸವರಾಜ ಮಲ್ಕಾಪುರೆ, ರಮೇಶ, ಸುಷ್ಮಾ ಸಾಗರ್, ಅಶ್ವಿನಿ ಕುಲಕರ್ಣಿ, ಧನಶೆಟ್ಟಿ, ಸುನಿಲ ಠಾಕೂರ್, ನೀಲಕಂಠರಾಯ, ಮಲ್ಲಿಕಾರ್ಜುನ ಪಾಟೀಲ, ಅರವಿಂದ ಪಾಟೀಲ, ಪ್ರತಿಮಾ, ಪ್ರದೀಪ್, ಬಿಜೆಪಿ ಮುಖಂಡರಾದ ಶ್ರೀನಿವಾಸ ದೇಸಾಯಿ, ಮಹಾದೇವ ಬೆಳಮಗಿ ಸೇರಿದಂತೆ ಹಲವು ಪಾಲಿಕೆ ಸಿಬ್ಬಂದಿ ಭಾಗವಹಿಸಿದ್ದರು.
ಶಾಸಕ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಲ್ಲಮಪ್ರಭು ಪಾಟೀಲ ಸ್ಥಳದಲ್ಲೇ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಮಾತನಾಡಿ ಪಾಲಿಕೆ ನೌಕರರಿಗೆ 7ನೇ ವೇತನ ಆಯೋಗ ಶಿಫಾರಸು ಮಾಡಿದ ಪೂರ್ಣ ಮೊತ್ತವನ್ನು ಆರ್ಥಿಕ ಇಲಾಖೆಯಿಂದಲೇ ಪಾವತಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಮೇಯರ್ ಯಲ್ಲಪ‍್ಪ ನಾಯಕೊಡಿ ಸ್ಥಳಕ್ಕೆ ಭೇಟಿ ನೀಡಿ ನೌಕರರ ಅಹವಾಲು ಆಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.