ADVERTISEMENT

ಸೇವೆ ಕಾಯಮಾತಿಗೆ ಒತ್ತಾಯಿಸಿ ಮುತ್ತಿಗೆ ಯತ್ನ

ಪೊರಕೆ ಹಿಡಿದು ಪೌರಕಾರ್ಮಿಕರ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 5:07 IST
Last Updated 5 ಜನವರಿ 2022, 5:07 IST
ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮುತ್ತಿಗೆ ಹಾಕಲು ಬಂದ ಪೌರಕಾರ್ಮಿಕರನ್ನು ಪೊಲೀಸರು ಎಸ್.ಎಂ.ಪಂಡಿತ ರಂಗಮಂದಿರದ ಬಳಿ ತಡೆದಿದ್ದರು
ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮುತ್ತಿಗೆ ಹಾಕಲು ಬಂದ ಪೌರಕಾರ್ಮಿಕರನ್ನು ಪೊಲೀಸರು ಎಸ್.ಎಂ.ಪಂಡಿತ ರಂಗಮಂದಿರದ ಬಳಿ ತಡೆದಿದ್ದರು   

ಕಲಬುರಗಿ: ಇಲ್ಲಿಯ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 477 ಪೌರಕಾರ್ಮಿಕರ ಸೇವೆ ಕಾಯಮಾತಿಗೆ ಅಧಿಸೂಚನೆ ಹೊರಡಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಹಾಗೂ ನೇಮಕಾತಿಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನೂರಾರು ಪೌರಕಾರ್ಮಿಕರು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಿಸಿಸಿ ಬ್ಯಾಂಕ್ ಕಾರ್ಯಕ್ರಮ ಆಯೋಜಿಸಿದ್ದ ಎಸ್‌.ಎಂ. ಪಂಡಿತ್ ರಂಗಮಂದಿರದವರೆಗೆ ಮೆರವಣಿಗೆ ನಡೆಸಿದ ಪೌರಕಾರ್ಮಿಕರು ಕಾರ್ಯಕ್ರಮ ಉದ್ಘಾಟಿಸಲು ಬಂದ ಬೊಮ್ಮಾಯಿ ಅವರನ್ನು ಮುತ್ತಿಗೆ ಹಾಕಲು ಯತ್ನಿಸಿದರು. ಇದಕ್ಕೆ ಪೊಲೀಸರು ತಡೆ ಒಡ್ಡಿದರು. ನಂತರ ಪ್ರತಿಭಟನೆಯ ಮಾಹಿತಿ ಪಡೆದ ಮುಖ್ಯಮಂತ್ರಿ ಅವರು ಪೌರಕಾರ್ಮಿಕರ ಬಳಿ ಬಂದು ಮನವಿ ಸ್ವೀಕರಿಸಿದರು.

ಮೂರು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡಿದ್ದು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು, ಯೋಜನಾ ನಿರ್ದೇಶಕರು, ಜಿಲ್ಲಾ ಕಾರ್ಮಿಕ ಅಧಿಕಾರಿ, ಪಾಲಿಕೆಯ ಪರಿಸರ ಎಂಜಿನಿಯರ್‌ ಅವರು ದೋಷದಿಂದ ಕೂಡಿದ ತಾತ್ಕಾಲಿಕ ಪಟ್ಟಿಯನ್ನು ತಯಾರಿಸಿದ್ದಾರೆ. ಇದರಲ್ಲಿ ನೈಜ ಅರ್ಹತೆ ಹೊಂದಿದ ಪೌರಕಾರ್ಮಿಕರ ಹೆಸರನ್ನು ಕೈಬಿಟ್ಟಿದ್ದಾರೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ. ಆ ವರದಿಯ ಆಧಾರದ ಮೇಲೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ 477 ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಬಹುಜನ ಸಮಾಜ ಪಕ್ಷದ ಮುಖಂಡ ಸೂರ್ಯಕಾಂತ ನಿಂಬಾಳಕರ, ಪೌರಕಾರ್ಮಿಕ ಮುಖಂಡ ಸುನೀಲ ಮಾರುತಿ ಮಾನಪಡೆ ಹಾಗೂ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಪೌರಕಾರ್ಮಿಕ ಮುಖಂಡರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ ಅವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ನಂತರ ಪೌರಕಾರ್ಮಿಕರು ಪ್ರತಿಭಟನೆ ವಾಪಸ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.