ADVERTISEMENT

ಭ್ರಷ್ಟಾಚಾರ: ಕೆಎಎಸ್ ಅಧಿಕಾರಿ ಶಂಕರಪ್ಪ ವಣಿಕ್ಯಾಳ ಜಾಮೀನು ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 9:29 IST
Last Updated 29 ಜೂನ್ 2022, 9:29 IST
ಶಂಕರಪ್ಪ ವಣಿಕ್ಯಾಳ
ಶಂಕರಪ್ಪ ವಣಿಕ್ಯಾಳ   

ಕಲಬುರಗಿ: ಸಂಸ್ಥೆಯೊಂದಕ್ಕೆ ಬಿಲ್ ಬಿಡುಗಡೆ ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟು ಅಧೀನ ಸಿಬ್ಬಂದಿ ಮೂಲಕ ಹಣ ಪಡೆದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಿಂದ ಬಂಧನಕ್ಕೊಳಗಾಗಿರುವ ಮಹಾನಗರ ಪಾಲಿಕೆ ಮಾಜಿ ಆಯುಕ್ತ, ಹಿರಿಯ ಕೆಎಎಸ್ ಅಧಿಕಾರಿ ಶಂಕರಪ್ಪ ವಣಿಕ್ಯಾಳ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಬುಧವಾರ ತಿರಸ್ಕರಿಸಿದೆ.

ಪಾಲಿಕೆಯ ಲೆಕ್ಕಾಧಿಕಾರಿ ಚನ್ನಪ್ಪ ಎಂಬಾತನ ಮೂಲಕ ವಣಿಕ್ಯಾಳ ಬಿಲ್‌ಗಳಿಗೆ ಮಂಜೂರಾತಿ ನೀಡಲು ಲಂಚದ ಹಣ ಪಡೆಯುತ್ತಿದ್ದರು. ಈ ಬಗ್ಗೆ ಪಾಲಿಕೆಗೆ ಕೋವಿಡ್ ಸಂದರ್ಭದಲ್ಲಿ ಸಹಾಯವಾಣಿ ಸೇವೆ ಒದಗಿಸಿದ ಶರಣಬಸಪ್ಪ ಅಂಬೆಸಿಂಗೆ ಎಂಬುವವರ ಬಿಲ್ ಪಾವತಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಜೂನ್ 1ರಂದು ಶಂಕರಪ್ಪ ವಣಿಕ್ಯಾಳ ಹಾಗೂ ಚನ್ನಪ್ಪನನ್ನು ಬಂಧಿಸಿದ್ದಾರೆ.

ಜಿಲ್ಲಾ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ವಣಿಕ್ಯಾಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ADVERTISEMENT

ಎಸಿಬಿ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಗೌರೀಶ ಕಾಶೆಂಪೂರ, ‘ಆರೋಪಿ ಹಿರಿಯ ಕೆೆಎಎಸ್ ಅಧಿಕಾರಿಯಾಗಿದ್ದರಿಂದ ಉತ್ತಮ ಸಂಬಳ, ಸವಲತ್ತು ಪಡೆಯುತ್ತಿದ್ದರು. ಆದರೂ, ಕೋವಿಡ್ ಕೆಲಸ ಮಾಡಿದ್ದಕ್ಕೆ ಕೊಡಬೇಕಿದ್ದ ಹಣದಲ್ಲೂ ಲಂಚಕ್ಕಾಗಿ ಕೈಚಾಚಿದ್ದಾರೆ. ಅಲ್ಲದೇ, ಅನಾರೋಗ್ಯದ ಕಾರಣ ನೀಡಿ ಬಹುತೇಕ ದಿನಗಳನ್ನು ಆಸ್ಪತ್ರೆಯಲ್ಲೇ ಕಳೆದಿದ್ದಾರೆ. ಜಾಮೀನು ನೀಡಿದರೆ ತನಿಖೆಗೆ ಸಹಕರಿಸದಿರುವ ಸಾಧ್ಯತೆ ಇದೆ’ ಎಂದು ವಾದ ಮಂಡಿಸಿದರು.

ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ. ಉಮಾ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಪ್ರಸ್ತುತ ವಣಿಕ್ಯಾಳ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಈಗಾಗಲೇ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.