
ಬಂಧನ
ಕಲಬುರಗಿ: ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಈಗ ಲೋಕಾಯುಕ್ತ ಸಂಸ್ಥೆ) ಸಿಕ್ಕಿಬಿದ್ದಿದ್ದ ಸಮಾಜ ಕಲ್ಯಾಣ ಇಲಾಖೆಯ ಎಫ್‌ಡಿಎ ನರಸಪ್ಪ ಕುಂಬಾರಗೆ ಕಲಬುರಗಿ ಪ್ರಧಾನ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷ ಜೈಲು ಹಾಗೂ ₹ 20 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಚಿತ್ತಾಪುರದಲ್ಲಿ ಖಾಜಾ ಮೈನುದ್ದೀನ್ ಶೇಖ ಚಾವೂಸ್ ಎಂಬುವರು ತಮ್ಮ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ಗಾಗಿ ₹ 38 ಸಾವಿರಕ್ಕೆ ಬಾಡಿಗೆ ನೀಡಿದ್ದರು. ಬಾಡಿಗೆ ಚೆಕ್ ನೀಡುವಾಗ ನರಸಪ್ಪ ₹ 2 ಸಾವಿರ ಲಂಚ ಪಡೆಯುತ್ತಿದ್ದ. ಈ ಕುರಿತು ಖಾಜಾ ಮೈನುದ್ದೀನ್ ಆಗಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಬಳಿಕ ಎಸಿಬಿ ಅಧಿಕಾರಿಗಳ ದಾಳಿ ವೇಳೆ ನರಸಪ್ಪ ಸಿಕ್ಕಿ ಬಿದ್ದಿದ್ದ.
ಈ ಸಂಬಂಧ ಪಿಎಸ್‌ಐ ಸಂತೋಷ ಬನ್ನಹಟ್ಟಿ ಪ್ರಕರಣದ ತನಿಖೆ ನಡೆಸಿ ನಸರಪ್ಪ ವಿರುದ್ಧ ಲಂಚ ನಿಷೇಧ ಕಾಯ್ದೆಯ ವಿವಿಧ ಕಲಂಗಳಡಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಅಪರಾಧಿಗೆ ನಾಲ್ಕು ವರ್ಷ ಜೈಲು ಹಾಗೂ ₹ 20 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆ ಪರವಾಗಿ ಸಾರ್ವಜನಿಕ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್.ಚಾಂದಕವಠೆ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.