ಕಲಬುರಗಿ: ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹದ ಹೊರ ಭಾಗದ ತೋಟದಿಂದ ಪರಾರಿಯಾಗಿದ್ದ ಅಪರಾಧಿಗೆ 2ನೇ ಜೆಎಂಎಫ್‌ಸಿ ನ್ಯಾಯಾಲಯವು ಒಂದು ವರ್ಷ ಐದು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿದ್ದ ರಮೇಶ ಶಿಕ್ಷೆಗೆ ಒಳಗಾದ ಅಪರಾಧಿ. 2021ರ ಜನವರಿ 4ರಂದು ಜೈಲಿನ ಹೊರಗಿನ ತೋಟದಲ್ಲಿ ತೊಗರಿ ಬಡಿಯಲು ರಮೇಶನನ್ನು ಕರೆದೊಯ್ಯಲಾಗಿತ್ತು. ಬೆಂಗಾವಲಿದ್ದ ಸಿಬ್ಬಂದಿಗೆ ಬಯಲು ಬಹಿರ್ದೆಸೆಗೆ ತೆರಳುವುದಾಗಿ ನೆಪ ಹೇಳಿದ ರಮೇಶ್, ಅಲ್ಲಿಂದ ಓಡಿ ಹೋಗಿ ಪರಾರಿಯಾಗಿದ್ದ.
ಈ ಬಗ್ಗೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಎಸ್‌ಐ ಥಾವರು ಚವ್ಹಾಣ್ ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಾದ– ಪ್ರತಿವಾದ ಆಲಿಸಿದ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸ್ಮಿತಾ ನಾಗಲಾಪುರ ಅವರು ರಮೇಶಗೆ ಒಂದು ವರ್ಷ ಐದು ತಿಂಗಳು ಜೈಲು ಶಿಕ್ಷೆ, ₹ 500 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಾಬಾಸಾಬ ಕಣ್ಣಿ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.