ADVERTISEMENT

ಕಲಬುರ್ಗಿ: ಸಂಕಷ್ಟದಲ್ಲಿ ರೊಟ್ಟಿ ಕೇಂದ್ರ

ಲಾಕ್‌ಡೌನ್‌ನಿಂದ ಖರೀದಿಗೆ ಬಾರದ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 4 ಮೇ 2020, 1:31 IST
Last Updated 4 ಮೇ 2020, 1:31 IST
ಮಲ್ಲಿಕಾರ್ಜುನ ಎಸ್‌.ಕುಂಬಾರ
ಮಲ್ಲಿಕಾರ್ಜುನ ಎಸ್‌.ಕುಂಬಾರ   

ಕಲಬುರ್ಗಿ: ಎರಡು ತಿಂಗಳಿನಿಂದ ನಗರದಲ್ಲಿನ ಬಹುತೇಕ ರೊಟ್ಟಿ ಕೇಂದ್ರಗಳಿಗೆ ಬೀಗ ಬಿದ್ದಿದೆ. ನಗರದಲ್ಲಿ 200ಕ್ಕೂ ಹೆಚ್ಚು ರೊಟ್ಟಿ ಕೇಂದ್ರಗಳಿದ್ದು, ಖಡಕ್‌ ರೊಟ್ಟಿ, ಚಪಾತಿ ಮಾರಾಟದ ಮೂಲಕವೇ ಬದುಕು ಕಟ್ಟಿಕೊಂಡಿದ್ದ ಅವುಗಳ ಮಾಲೀಕರು ಹಾಗೂ ಅಲ್ಲಿ ದಿನಗೂಲಿಗೆ ದುಡಿಯುತ್ತಿದ್ದ ಕಾರ್ಮಿಕರು ಇದೀಗ ಸಂಕಷ್ಟದಲ್ಲಿದ್ದಾರೆ.

ಲಾಕ್‌ಡೌನ್‌ಗೂ ಮುನ್ನ ಆರ್ಥಿಕವಾಗಿ ಸ್ಥಿತಿವಂತರು ಹೋಟೆಲ್‌ಗಳಿಗೆ ತೆರಳಿ ಊಟ ಮಾಡುತ್ತಿದ್ದರು. ಆದರೆ, ತೀರಾ ಬಡವರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ರೊಟ್ಟಿ ಕೇಂದ್ರಗಳನ್ನೇ ನೆಚ್ಚಿಕೊಂಡಿದ್ದರು. ‌

ಇಲ್ಲಿ ಸಿಗುವ ಖಡಕ್‌ ರೊಟ್ಟಿಗಳ ದರ ಕಡಿಮೆ. ವಾರಗಟ್ಟಲೆ ಖಡಕ್‌ ರೊಟ್ಟಿಗಳನ್ನು ತಿನ್ನಬಹುದು. ರೊಟ್ಟಿ ಜೊತೆ ಶೇಂಗಾ ಹಿಂಡಿ ಅಥವಾ ಮೊಸರು ಇದ್ದರೂ ಒಂದೊತ್ತಿನ ಊಟ ಮುಗಿಯುತ್ತೆ. ಹೀಗಾಗಿಯೇ ದಿನಗೂಲಿ ನೌಕರರು ಹಾಗೂ ಮನೆಯಲ್ಲಿ ಒಬ್ಬರೇ ಇರುವವರು ಖಡಕ್‌ ರೊಟ್ಟಿಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದರು.

ADVERTISEMENT

ನಗರದ ಬ್ರಹ್ಮಪುರ ಬಡಾವಣೆಯೊಂದರಲ್ಲೇ ಹತ್ತಕ್ಕೂ ಹೆಚ್ಚು ರೊಟ್ಟಿ ಕೇಂದ್ರಗಳಿವೆ. ಇವುಗಳ ಪೈಕಿ ಒಂದೆರೆಡು ಕೇಂದ್ರದವರು, ತಮ್ಮ ಮನೆಗಳಲ್ಲಿಯೇ ರೊಟ್ಟಿ ಮಾರಾಟ ಮಾಡುತ್ತಿದ್ದಾರೆ.

ಕಡಿಮೆ ದರ

ಲಾಕ್‌ಡೌನ್‌ಗೂ ಮೊದಲು ₹4ರಿಂದ ₹6ರ ವರೆಗೆ ಒಂದು ಖಡಕ್ ರೊಟ್ಟಿಯನ್ನು ಮಾರಾಟ ಮಾಡಲಾಗುತ್ತಿತ್ತು. ಆದರೀಗ ಗ್ರಾಹಕರೇ ಇಲ್ಲದಿರುವುದರಿಂದ ರೊಟ್ಟಿ ದರವನ್ನು ₹3ರಿಂದ ₹4ಕ್ಕೆ ಇಳಿಸಲಾಗಿದೆ. ‘ಮೊದಲು ದಿನಕ್ಕೆ
250ರಿಂದ 300 ರೊಟ್ಟಿ ಮಾರುತ್ತಿದ್ದೆವು. ಆದರೀಗ 50ರಿಂದ 100 ರೊಟ್ಟಿ ಮಾರಾಟವಾಗುವುದೇ ಹೆಚ್ಚು. ಮೊದಲು
ನಾಲ್ಕು ಮಹಿಳೆಯರು ಕೆಲಸಕ್ಕೆ ಬರುತ್ತಿ ದ್ದರು. ಆದರೀಗ ಇಬ್ಬರೇ ಬರುತ್ತಾರೆ. ಅವರಿಗೂ ಕೆಲಸ ಇಲ್ಲದಂತಾಗದಿರಲಿ ಎಂಬ ಕಾರಣಕ್ಕೆ ಮನೆಯಿಂದಲೇ ರೊಟ್ಟಿ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಜೈಭವಾನಿ ರೊಟ್ಟಿ ಕೇಂದ್ರದ ಮಾಲೀಕ
ರಾದ ಸಾವಿತ್ರಿ.

ಖಾಯಂ ಗಿರಾಕಿಗಳಿಂದ ಖರೀದಿ

‘ಊಟ ಸೇರಿದಂತೆ ದಿನಕ್ಕೆ 500ರಿಂದ 600 ರೊಟ್ಟಿಗಳನ್ನು ಮಾರಾಟ ಮಾಡುತ್ತಿದ್ದೆವು. ಆದರೀಗ ರೊಟ್ಟಿಗಳೇ ಮಾರಾಟ ಆಗುತ್ತಿಲ್ಲವಾದ್ದರಿಂದ ಕೆಲಸಕ್ಕೆ ಯಾರನ್ನೂ ಕರೆಯುತ್ತಿಲ್ಲ. ಇದರಿಂದ ಕಾರ್ಮಿಕ ಮಹಿಳೆಯರಿಗೂ ಕೆಲಸ ಇಲ್ಲದಂತಾಗಿದೆ. ಮನೆಯವರೇ ಒಂದಿಷ್ಟು ರೊಟ್ಟಿಗಳನ್ನು ತಯಾರಿಸುತ್ತಾರೆ. ಕಾಯಂ ಗಿರಾಕಿಗಳಷ್ಟೇ ಬಂದು ರೊಟ್ಟಿ ಖರೀದಿಸುತ್ತಿದ್ದಾರೆ. ದಿನಕ್ಕೆ 100 ರೊಟ್ಟಿ ಕೂಡ ಮಾರಾಟವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು ಭಾಗ್ಯವಂತಿ ಮೀಲ್ಸ್‌ ಪಾರ್ಸಲ್‌ ಕೇಂದ್ರದ ಮಾಲೀಕ ಮಲ್ಲಿಕಾರ್ಜುನ ಎಸ್‌.ಕುಂಬಾರ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.