ADVERTISEMENT

ಕಲಬುರ್ಗಿ: ಇಎಸ್‍ಐಸಿ ಆಸ್ಪತ್ರೆಯಲ್ಲಿ ಶೀಘ್ರ ಕೋವಿಡ್‌ ಲ್ಯಾಬ್: ಡಾ. ಉಮೇಶ ಜಾಧವ

ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಡಾ. ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 14:47 IST
Last Updated 13 ಜುಲೈ 2020, 14:47 IST
ಸಂಸದ ಡಾ.ಉಮೇಶ ಜಾಧವ ಅವರು ಇಎಸ್‌ಐಸಿ ವೈದ್ಯಾಧಿಕಾರಿಗಳಿಂದ ಕೋವಿಡ್‌–19 ಲ್ಯಾಬ್ ಕುರಿತಂತೆ ಮಾಹಿತಿ ಪಡೆದರು. ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಇಎಸ್‌ಐಸಿ ಡೀನ್ ಡಾ.ನಾಗರಾಜ ಇದ್ದರು
ಸಂಸದ ಡಾ.ಉಮೇಶ ಜಾಧವ ಅವರು ಇಎಸ್‌ಐಸಿ ವೈದ್ಯಾಧಿಕಾರಿಗಳಿಂದ ಕೋವಿಡ್‌–19 ಲ್ಯಾಬ್ ಕುರಿತಂತೆ ಮಾಹಿತಿ ಪಡೆದರು. ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಇಎಸ್‌ಐಸಿ ಡೀನ್ ಡಾ.ನಾಗರಾಜ ಇದ್ದರು   

ಕಲಬುರ್ಗಿ: ನಗರದ ಇಎಸ್‍ಐಸಿ ಆಸ್ಪತ್ರೆಯಲ್ಲಿ ಕೋವಿಡ್–19 ಸೋಂಕು ಪತ್ತೆ ಮಾಡುವ ಪ್ರಯೋಗಾಲಯವನ್ನು ಶೀಘ್ರವೇ ಆರಂಭಿಸಲಾಗುತ್ತಿದೆ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು.

ಪ್ರಜಾವಾಣಿಯಲ್ಲಿ ಸೋಮವಾರ ‘ಇಎಸ್‌ಐಸಿ ಲ್ಯಾಬ್‌ ನನೆಗುದಿಗೆ; ಜಿಮ್ಸ್‌ಗೆ ಹೊರೆ’ ವರದಿ ಪ್ರಕಟವಾದ ಬೆನ್ನಲ್ಲೇ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಮಾಹಿತಿ ಪಡೆದರು.

ಆಸ್ಪತ್ರೆಗೆ ಅಧಿಕಾರಿಗಳು, ಕೊಠಡಿಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಪ್ರಯೋಗಾಲಯಕ್ಕೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಆರ್‌ಟಿಪಿಸಿಆರ್‌ ಯಂತ್ರ ಸೇರಿದಂತೆ ಪ್ರಯೋಗಾಲಯಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಪೂರೈಸಲು ಗುತ್ತಿಗೆ ಸಂಸ್ಥೆಗಳು ಅಸಕ್ತಿ ತೋರುತ್ತಿಲ್ಲ. ಲಾಕ್‍ಡೌನ್, ಫ್ಯಾಕ್ಟರಿಗಳು ಬಂದ್ ಆಗಿವೆ ಎಂಬ ಮತ್ತಿತರ ಸಬೂಬು ಹೇಳುತ್ತಿದ್ದಾರೆ. ಕೇವಲ ಸಣ್ಣಪುಟ್ಟ ಸಾಮಗ್ರಿಗಳಷ್ಟೇ ಪೂರೈಕೆಯಾಗಿವೆ. ಪ್ರಮುಖವಾದ ಆರ್‌ಟಿಪಿಸಿಆರ್ ಯಂತ್ರ ಇನ್ನೂ ಬಂದಿಲ್ಲ. ಈ ಸಂಬಂಧ ದೆಹಲಿಯ ಗುತ್ತಿಗೆ ಸಂಸ್ಥೆಗೆ ಫೋನ್ ಮಾಡಿದರೂ, ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಡೀನ್ ಡಾ.ನಾಗರಾಜ ಉತ್ತರ ನೀಡಿದರು.

ADVERTISEMENT

ಕೂಡಲೇ ಆ ಸಂಸ್ಥೆಗೆ ಫೋನ್ ಮಾಡುವಂತೆ ಸಂಸದರು ಸೂಚಿಸಿದರು. ಅಧಿಕಾರಿಗಳು ಫೋನ್ ಮಾಡಿ ಮಾತು ಆರಂಭಿಸಿದ್ದಂತೆ ಆ ಕಡೆಯಿಂದ ಫೋನ್ ಸ್ಥಗಿತಗೊಳಿಸಲಾಯಿತು.

ಈ ಸಂಬಂಧ ಕಾರ್ಮಿಕ ಮಂತ್ರಾಲಯದ ಜಂಟಿ ನಿರ್ದೇಶಕ ಅನುರಾಧ ಪ್ರಸಾದ್ ಅವರಿಗೆ ಫೋನ್ ಮಾಡಿದ ಸಂಸದರು, ಪರಿಸ್ಥಿತಿಯನ್ನು ವಿವರಿಸಿದರು. ಪ್ರಯೋಗಾಲಯಕ್ಕೆ ಆರ್‌ಟಿಪಿಸಿಆರ್ ಸಾಧನ ಪೂರೈಸದ ಗುತ್ತಿಗೆ ಸಂಸ್ಥೆಯನ್ನು ಕೂಡಲೇ ಕಪ್ಪುಪಟ್ಟಿಗೆ ಹಾಕುವಂತೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುರಾಧ ಪ್ರಸಾದ್, ಈಗಾಗಲೇ ಕರ್ನಾಟಕದ ಕೆಲ ಜಿಲ್ಲೆಗಳು ಪ್ರಯೋಗಾಲಯಕ್ಕೆ ಬೇಕಾದ ಸಾಮಗ್ರಿಗಳನ್ನು ರಾಜ್ಯ ಸರ್ಕಾರದಿಂದಲೇ ಪಡೆದಿದ್ದು, ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ಪ್ರಯೋಗಾಲಯದ ಪರಿಕರಗಳನ್ನು ಶೀಘ್ರ ಪಡೆಯುವಂತೆ ಇಎಸ್‍ಐಸಿ ನಿರ್ದೇಶಕ ಡಾ. ನಾಗರಾಜ ಅವರಿಗೆ ಸೂಚಿಸಿದರು.

ಸಂಸದ ಜಾಧವ ಅವರು ಸೂಚನೆ ಮೇರೆಗೆ, ಇಎಸ್‍ಐಸಿ ಅಧಿಕಾರಿಗಳು, ಸ್ಥಳದಲ್ಲಿಯೇ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಸಿದ್ಧಪಡಿಸಿ, ರವಾನಿಸಿದರು.

ಇದಕ್ಕೂ ಮೊದಲು ಸಭೆ: ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್–19 ಪ್ರಯೋಗಾಲಯ ಕುರಿತು ಇಎಸ್‍ಐಸಿ ಮೆಡಿಕಲ್ ಕಾಲೇಜು, ಬಸವೇಶ್ವರ ಆಸ್ಪತ್ರೆ ಹಾಗೂ ಕೆಬಿಎನ್ ಆಸ್ಪತ್ರೆಯ ಅಡಳಿತ ಅಧಿಕಾರಿಗಳು ಹಾಗೂ ವೈದ್ಯರ ಜೊತೆ ಸಭೆ ನಡೆಯಿತು. ಸಂಸದ ಡಾ. ಉಮೇಶ ಜಾಧವ, ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮುತ್ತಿಮೂಡ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾಧಿಕಾರಿ ಶರತ್. ಬಿ, ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.