ADVERTISEMENT

ಕೋವಿಡ್‌ ಮಾರ್ಗಸೂಚಿ ಕಡೆಗಣನೆ: 28 ಉದ್ದಿಮೆ ಬಂದ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 3:11 IST
Last Updated 10 ಏಪ್ರಿಲ್ 2021, 3:11 IST

ಬೆಂಗಳೂರು: ಕೋವಿಡ್‌ ನಿಯಂತ್ರಣದ ಮಾರ್ಗಸೂಚಿ ಕಡೆಗಣಿಸಿರುವ ಹೋಟೆಲ್, ಮಳಿಗೆಗಳು ಸೇರಿ 28 ಉದ್ದಿಮೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ಬಾಗಿಲು ಹಾಕಿಸಿದರು.

ಪಶ್ಚಿಮ ವಲಯದಲ್ಲಿ ಗಾಂಧಿನಗರದ ಲಾಸ್ಸೊ ಬಾರ್‌ ಮತ್ತು ರೆಸ್ಟೋರೆಂಟ್‌, ಟೀ ಅಂಗಡಿ, ರಶ್ಮಿ ಫ್ಯಾನ್ಸಿ ಅಂಗಡಿ, ಪೂನಂ ಕಾಂಡಿಮೆಂಟ್ಸ್‌ ಮಳಿಗೆ, ಶ್ರೀಕೃಷ್ಣ ಬೇಕರಿಗಳಿಗೆ ಅಧಿಕಾರಿಗಳು ಬೀಗ ಹಾಕಿಸಿದ್ದಾರೆ. ಈ ವಲಯದಲ್ಲಿ 17 ಮಳಿಗೆಗಳಿಗೆ ಒಟ್ಟು ₹15,100 ದಂಡ ವಿಧಿಸಿದ್ದಾರೆ.

ಪೂರ್ವ ವಲಯದಲ್ಲಿ ಶಿವಾಜಿನಗರದ ರವಿ ಟೀ ಅಂಗಡಿ, ವಿನಾಯಕ ಚಿಪ್ಸ್‌, ಡಿಸೋಜ ಜ್ಯೂಸ್‌ ಸೆಂಟರ್‌, ಹೆಬ್ಬಾಳದ ಬಸವೇಶ್ವರ ಪ್ರಾವಿಷನಲ್‌ ಸ್ಟೋರ್‌, ಶಾಂತಿನಗರದ ಉಡುಪಿ ಹೋಟೆಲ್‌, ಮೇಘನಾ ಫುಡ್‌ ಆ್ಯಂಡ್‌ ರೆಸ್ಟೋರಂಟ್‌, ಸಿ.ವಿ.ರಾಮನ್‌ನಗರದ ಕಬ್ಬಾಳಮ್ಮ ಕಾಂಡಿಮೆಂಟ್ಸ್‌, ಗೋಲ್ಡನ್ ಸಿಜರ್‌ ಸಲೂನ್‌, ಟೈಮ್ ಪಾಸ್‌ ಮಳಿಗೆ, ಫ್ರುಟ್‌ ಫೇಸ್‌ ಜ್ಯೂಸ್‌ ಮಳಿಗೆ, ಶರೀಫ್ ಅವರ ಟೀ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಶಿವಾಜಿನಗರದ ನೋಬಲ್‌ ಸೂಪರ್‌ ಮಾರ್ಕೆಟ್‌ಗೆ ₹ 25 ಸಾವಿರ ಹಾಗೂ ಶಾಂತಿನಗರದ ನಾಗಾರ್ಜುನ ರೆಸ್ಟೋರಂಟ್‌ಗೆ ₹ 10 ಸಾವಿರ ದಂಡ ವಿಧಿಸಲಾಗಿದೆ. ಪೂರ್ವ ವಲಯದಲ್ಲಿ ವಿವಿಧ ಮಳಿಗೆಗಳಿಗೆ ಒಟ್ಟು ₹ 58 ಸಾವಿರ ದಂಡ ವಿಧಿಸಲಾಗಿದೆ.

ADVERTISEMENT

ದಾಸರಹಳ್ಳಿ ವಲಯದ ಉಡುಪಿ ರುಚಿ ಹೋಟೆಲ್‌ಗೆ ₹ 5 ಸಾವಿರ ದಂಡ ಸೇರಿ ಒಟ್ಟು ₹ 7ಸಾವಿರ ದಂಡ ವಿಧಿಸಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ಸಾರಕ್ಕಿಯ ಮುನೇಶ್ವರ ಮೋಟಾರ್ಸ್‌, ಬೇಗೂರು ಮುಖ್ಯ ರಸ್ತೆಯ ದಾವಣಗೆರೆ ಮಿರ್ಚಿ ಸೆಂಟರ್‌ ಹಾಗೂ ಪ್ರಿಯಾ ಹೋಮ್‌ ನೀಡ್ಸ್‌ ಮಳಿಗೆಗಳನ್ನು ಮುಚ್ಚಿಸಲಾಗಿದೆ. ಈ ವಲಯದಲ್ಲಿ ವಿವಿಧ ಮಳಿಗೆಗಳಿಗೆ ಒಟ್ಟು ₹ 71 ಸಾವಿರ ದಂಡ ವಿಧಿಸಲಾಗಿದೆ.

ಮಹದೇವಪುರ ವಲಯದಲ್ಲಿ ದೊಡ್ಡನೆಕ್ಕುಂದಿಯ ಮೋರ್‌ ರಿಟೇಲ್‌ ಮಳಿಗೆ, ಓಯಸಿಸ್‌ ಕೇರಳ ರೆಸ್ಟೋರಂಟ್‌ ಹಾಗೂ ಕಾಡುಗೋಡಿ ಮುಖ್ಯ ರಸ್ತೆಯ ಸ್ಟಾರ್‌ ಬೇಕರಿಗಳಿಗೆ ಬೀಗ ಹಾಕಿಸಲಾಗಿದೆ. ಇವುಗಳಿಗೆ ಒಟ್ಟು ₹ 20 ಸಾವಿರ ದಂಡವನ್ನೂ ವಿಧಿಸಲಾಗಿದೆ.

ಯಲಹಂಕ ವಲಯದಲ್ಲಿ ಬ್ಯಾಟರಾಯನಪುರದ ನ್ಯೂ ತಾಜ್‌ ರೆಸ್ಟೋರಂಟ್‌ ಮುಚ್ಚಿಸಲಾಗಿದೆ. ಈ ವಲಯದಲ್ಲಿ ವಿವಿಧ ಮಳಿಗೆಗಳಿಗೆ ಒಟ್ಟು ₹ 2500 ದಂಡ ವಿಧಿಸಲಾಗಿದೆ. ದಕ್ಷಿಣ ವಲಯದಲ್ಲಿ ವಿಜಯನಗರದ ಕಾಫಿ ಶಾಪ್‌ ಮುಚ್ಚಿಸಲಾಗಿದೆ. ಆರ್.ಆರ್.ನಗರದ ಎ ಟು ಜೆಡ್‌ ಮಾರ್ಕೆಟ್‌ ಅನ್ನು ಮುಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.