ADVERTISEMENT

ಕಲಬುರಗಿ: ಒತ್ತಾಯದಿಂದ ಮಾಸ್ಕ್ ಹಾಕಿಸುವ ಸವಾಲು!

ಓಮೈಕ್ರಾನ್ ಭೀತಿ; ಕೋವಿಡ್‌ ಮಾರ್ಗಸೂಚಿ ಪಾಲಿಸಲು ಹೆಚ್ಚಿದ ಒತ್ತಡ

ಮನೋಜ ಕುಮಾರ್ ಗುದ್ದಿ
Published 4 ಡಿಸೆಂಬರ್ 2021, 19:45 IST
Last Updated 4 ಡಿಸೆಂಬರ್ 2021, 19:45 IST
ಕಲಬುರಗಿಯ ಆರ್ಕಿಡ್ ಮಾಲ್‌ನ ಮಳಿಗೆಯೊಂದಕ್ಕೆ ಯುವತಿಯರು ಮಾಸ್ಕ್ ಹಾಕದೇ ತೆರಳಿದರು ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿಯ ಆರ್ಕಿಡ್ ಮಾಲ್‌ನ ಮಳಿಗೆಯೊಂದಕ್ಕೆ ಯುವತಿಯರು ಮಾಸ್ಕ್ ಹಾಕದೇ ತೆರಳಿದರು ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ಬೆಂಗಳೂರಿನಲ್ಲಿ ಕೋವಿಡ್‌ ಹೊಸ ತಳಿ ಓಮೈಕ್ರಾನ್ ಇಬ್ಬರಿಗೆ ಪತ್ತೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಹಲವು ಕೋವಿಡ್ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕಡ್ಡಾಯ ಮಾಸ್ಕ್, ಸ್ಯಾನಿಟೈಜರ್ ಹಾಕಿಕೊಳ್ಳುವ ನಿಯಮ ಮರು ಜಾರಿಗೆ ತರಲು ನಗರದ ಮಾಲ್‌ಗಳು, ಮಾರುಕಟ್ಟೆ ಪ್ರದೇಶ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸ ಪಡಬೇಕಾಗಿದೆ.

ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯು ನಗರದ ಹಲವು ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್‌ ನಡೆಸಿದ ಸಂದರ್ಭದಲ್ಲಿ ಬಹುತೇಕ ಗ್ರಾಹಕರು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸದೇ ಇರುವುದು ಕಂಡು ಬಂತು.

ಕೆಲವು ಗ್ರಾಹಕರನ್ನು ಮಾತಿಗೆಳೆದಾಗ, ‘ಈಗಾಗಲೇ ಕೋವಿಡ್ ಲಸಿಕೆ ಪಡೆದುಕೊಂಡಾಗಿದೆ. ಮತ್ತೆ ಮಾಸ್ಕ್ ಹಾಕುವ ಅಗತ್ಯವಿಲ್ಲ. ಮತ್ತೆ ಮಾಸ್ಕ್, ಸ್ಯಾನಿಟೈಜರ್‌ ಬಳಸುವುದಾದರೆ ಲಸಿಕೆ ಪಡೆದು ಏನು ಪ್ರಯೋಜನ’ ಎಂದೂ ಮರುಪ್ರಶ್ನೆ ಹಾಕಿದರು. ಇನ್ನು ಕೆಲವರು ಮಾಸ್ಕ್ ಹಾಕಿಕೊಳ್ಳದೇ ಬಂದವರು ಮಾಲ್‌ ಬರುತ್ತಿದ್ದಂತೆಯೇ ಅನಿವಾರ್ಯವಾಗಿ ಜೇಬಿನಲ್ಲಿದ್ದ ಮಾಸ್ಕ್ ಹಾಕಿಕೊಂಡರು.

ADVERTISEMENT

ಕೆಲ ಮಳಿಗೆಗಳಲ್ಲಿ ಮಾಸ್ಕ್ ಕಡ್ಡಾಯ: ನಗರದ ಆರ್ಕಿಡ್ ಮಾಲ್‌ನಲ್ಲಿರುವ ರಿಲಯನ್ಸ್‌ ಸ್ಮಾರ್ಟ್‌ ಸೂಪರ್‌ ಸ್ಟೋರ್‌ನಲ್ಲಿರುವ ಭದ್ರತಾ ಸಿಬ್ಬಂದಿ ಗ್ರಾಹಕರು ಮಾಸ್ಕ್ ಹಾಕಿಕೊಂಡಿದ್ದನ್ನು ಖಚಿತಪಡಿಸಿಕೊಂಡೇ ಒಳಗೆ ತೆರಳಲು ಅವಕಾಶ ನೀಡುತ್ತಿದ್ದಾರೆ. ಅಷ್ಟಾಗಿಯೂ ಕೆಲವು ಗ್ರಾಹಕರು ಒತ್ತಾಯ ಪೂರ್ವಕವಾಗಿ ಒಳನುಗ್ಗುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆದ ಘಟನೆಗಳೂ ಹಿಂದೆ ನಡೆದಿವೆ ಎನ್ನುತ್ತಾರೆ ರಿಲಯನ್ಸ್‌ ಸ್ಮಾರ್ಟ್‌ನ ಸೀನಿಯರ್ ಮ್ಯಾನೇಜರ್ ನವೀನ್ ಟಿ.

ಆರ್ಕಿಡ್ ಮಾಲ್‌ನಲ್ಲಿರುವ ಮಳಿಗೆಗೆ ತೆರಳಿದ ತರುಣಿಯರ ಗುಂಪು ಮಾಸ್ಕ್ ಹಾಕಿರಲಿಲ್ಲ. ಮಾಸ್ಕ್ ಹಾಕದವರ ಚಿತ್ರಗಳನ್ನು ಸೆರೆಹಿಡಿಯುವುದನ್ನು ಕಂಡ ಗ್ರಾಹಕರು ಮಾಸ್ಕ್ ಹಾಕಿಕೊಳ್ಳಲು ಶುರು ಮಾಡಿದರು.

ಏಷಿಯನ್ ಮಾಲ್‌ನಲ್ಲಿಯೂ ಮಾಸ್ಕ್ ಹಾಕಿಕೊಂಡು ಬರುವವರ ಸಂಖ್ಯೆ ಕಡಿಮೆಯೇ ಇತ್ತು. ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಮಾಲ್‌ನ ಭದ್ರತಾ ಸಿಬ್ಬಂದಿ ಹೇಳಿದಾಗ ‘ನಾವು ಮಾಸ್ಕ್ ತರಲಿಕ್ಕೇ ಬಂದಿದ್ದೇವೆ’ ಎಂದು ಕೆಲವು ಗ್ರಾಹಕರು ಹೇಳಿ ಒಳಗೆ ಪ್ರವೇಶಿಸಿದರು!

ನಿಯಮ ಪಾಲಿಸಲು ಸೂಚನೆ: ರಾಜ್ಯ ಸರ್ಕಾರದ ಸೂಚನೆ ಬಂದ ಬಳಿಕ ಮತ್ತೆ ಸಕ್ರಿಯವಾಗಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಪಾಡಿಕೊಂಡು ವಹಿವಾಟು ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ, ಮೂರ್ನಾಲ್ಕು ದಿನಗಳ ಹಿಂದೆಯೇ ಬಹುತೇಕ ಮಳಿಗೆಗಳ ಎದುರು ಮಾಸ್ಕ್ ಧರಿಸಿ ಒಳಗೆ ಬರಬೇಕು ಎಂದು ಸೂಚನಾ ಫಲಕವನ್ನು ಅಂಟಿಸಲಾಗಿದೆ.

ವ್ಯಾಪಾರ ಕುಸಿತದ ಭೀತಿ

ಸರ್ಕಾರವು ಕೋವಿಡ್ ನಿಯಂತ್ರಣ ಕ್ರಮಗಳನ್ನು ಹೇರಿದಷ್ಟೂ ಮಾಲ್‌ಗಳಲ್ಲಿ ಲಕ್ಷಾಂತರ ರೂಪಾಯಿ ಬಾಡಿಗೆ ತೆತ್ತು ಮಳಿಗೆಗಳನ್ನು ಹಿಡಿದಿರುವವರಿಗೆ ವಹಿವಾಟು ಕುಸಿಯುವ ಭೀತಿ ಕಾಡುತ್ತಿದೆ.

ಎರಡು ವರ್ಷಗಳಿಂದ ಬಾಧಿಸುತ್ತಿರುವ ಕೋವಿಡ್‌ ಸೋಂಕಿನಿಂದಾಗಿ ಹಲವರು ಆದಾಯ ಮೂಲಗಳಿಗೆ ಹೊಡೆತ ಬಿದ್ದಿದೆ. ಇದ್ದುದರಲ್ಲಿಯೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಖರೀದಿಗಾಗಿ ಮಾಲ್‌ಗಳಿಗೆ ಬರುವವರ ಸಂಖ್ಯೆಯೂ ಕುಸಿದಿದೆ. ಉತ್ತಮ ವಹಿವಾಟು ನಡೆಯುವ ಭರವಸೆಯಿಂದ ಮಳಿಗೆ ತೆರೆದರೂ ಗ್ರಾಹಕರು ಬರುತ್ತಿಲ್ಲ. ಬರುವ ಕೆಲವೇ ಕೆಲವು ಗ್ರಾಹಕರಿಗೂ ಮಾಸ್ಕ್ ಕಡ್ಡಾಯದಂತಹ ನಿಯಮಗಳನ್ನು ಹೇರಿದರೆ ಇತ್ತ ಬರದಿರುವ ಸಾಧ್ಯತೆಗಳಿರುತ್ತದೆ. ಒಂದೆಡೆ ಸರ್ಕಾರದ ನಿಯಮವನ್ನೂ ಪಾಲಿಸಬೇಕು. ಮತ್ತೊಂದೆಡೆ ಗ್ರಾಹಕರ ಮನವೊಲಿಸಬೇಕು ಎಂದು ಬಟ್ಟೆ ಮಳಿಗೆಯೊಂದರ ವ್ಯಾಪಾರಿಯೊಬ್ಬರು ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.