ಚಿಂಚೋಳಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಲಾಕ್‌ಡೌನ್ ಕಾರಣ ತಾಲ್ಲೂಕಿನಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ಜನರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ.
ತಾಲ್ಲೂಕಿನ ಕೊಳ್ಳೂರು ಕ್ರಾಸ್, ಮಿರಿಯಾಣ ಮತ್ತು ಕುಂಚಾವರಂನಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಪೊಲೀಸರು ಹಾಗೂ ಗೃಹರಕ್ಷಕರನ್ನು ಅಲ್ಲಿ ನಿಯೋಜಿಸಲಾಗಿದೆ.
ಚಿಂಚೋಳಿ ಚಂದಾಪುರ ಅವಳಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನರ ಸ್ಪಂದನೆ ಉತ್ತಮವಾಗಿತ್ತು. ಪಟ್ಟಣದಲ್ಲಿ ಅಗತ್ಯವಸ್ತುಗಳಾದ ಹಾಲು, ಹಣ್ಣು, ತರಕಾರಿ, ದಿನಸಿ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ವರೆಗೆ ಅವಕಾಶ ನೀಡಲಾಗಿತ್ತು. ನಂತರ ಅಂಗಡಿಗಳನ್ನು ಮುಚ್ಚಲಾಯಿತು. ಬೆಳಿಗ್ಗೆ 11 ಗಂಟೆ ನಂತರ ಅನಗತ್ಯವಾಗಿ ಓಡಾಡುತ್ತಿದ್ದ 20 ಬೈಕ್‌ಗಳು ಮತ್ತು 5 ವಾಹನ (ನಾಲ್ಕು ಚಕ್ರಗಳ ವಾಹನ) ವಶಪಡಿಸಿಕೊಂಡು ಅವರಿಗೆ ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಚಿಂಚೋಳಿ ಠಾಣೆಯ ಸಬ್ ಇನಸ್ಪೆಕ್ಟರ್(ಎಸ್‌ಐ) ಎ.ಎಸ್.ಪಟೇಲ್ ತಿಳಿಸಿದರು.
ತಾಲ್ಲೂಕಿನ ಸುಲೇಪೇಟದಲ್ಲಿ 11 ಬೈಕ್ ವಶಪಡಿಸಿಕೊಂಡು ₹5,700 ದಂಡ ವಿಧಿಸಲಾಗಿದೆ ಎಂದು ಎಸ್‌ಐ ವಾತ್ಸಲ್ಯ ತಿಳಿಸಿದರು.
ಮಿರಿಯಾಣದಲ್ಲಿ 15 ಬೈಕ್ ಮತ್ತು 1 ಕಾರು ವಶಕ್ಕೆ ಪಡೆದು ದಂಡ ಹಾಕಲಾಗಿದೆ ಎಂದು ಎಸ್‌ಐ ಸಂತೋಷ ರಾಠೋಡ್ ತಿಳಿಸಿದರು. ಕುಂಚಾವರಂನಲ್ಲಿ 17 ಬೈಕ್ ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ ಎಸ್‌ಐ ಉಪೇಂದ್ರಕುಮಾರ ತಿಳಿಸಿದರು.
ಇನ್ಸಿಡೆಂಟ್ ಕಮಾಂಡರ್ ಭೇಟಿ: ತಾಲ್ಲೂಕಿನ ಕೊಳ್ಳೂರು ಕ್ರಾಸ್‌ನಲ್ಲಿ ತೆರೆದ ಚೆಕ್‌ಪೋಸ್ಟ್‌ಗೆ ಇನ್ಸಿಡೆಂಟ್ ಕಮಾಂಡರ್ (ಬಿಇಒ) ನಾಗಶೆಟ್ಟಿ ಭದ್ರಶೆಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಕೃಷಿ ಚಟುವಟಿಕೆಗೆ ಅಡ್ಡಿಬೇಡ ಅನಗತ್ಯ ಓಡಾಡುವವರ ಮೇಲೆ ಮತ್ತು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವವರ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಅಧಿಕಾರಿಗಳ ಸಭೆ: ಇಲ್ಲಿನ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಇನ್ಸಿಡೆಂಟ್ ಕಮಾಂಡರ್‌ಗಳು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರ ಸಭೆ ನಡೆಸಿದ ತಹಶೀಲ್ದಾರರು ಕೋವಿಡ್ ಕಡಿವಾಣಕ್ಕೆ ಬಿಗಿಕ್ರಮ ಅನಿವಾರ್ಯವಾಗಿದೆ. ಇದು ಪಟ್ಟಣಕ್ಕೆ ಸೀಮಿತವಾಗದೇ ಹಳ್ಳಿಗಳಲ್ಲೂ ಜಾರಿಯಾಗಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಡಾ. ಧನರಾಜ ಬೊಮ್ಮಾ, ಮುನೀರ್ ಅಹಮದ್, ನಾಗಶೆಟ್ಟಿ ಭದ್ರಶೆಟ್ಟಿ, ಚಂದ್ರಕಾಂತ ಪಾಟೀಲ, ಇಒ ಅನಿಲಕುಮಾರ ರಾಠೋಡ, ಟಿಎಚ್ಒ ಡಾ.ಮಹಮದ್ ಗಫಾರ ಇದ್ದರು
ಸಂಪರ್ಕಿತರ ಪತ್ತೆಗೆ 119 ಶಿಕ್ಷಕರ ನಿಯೋಜನೆ: ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸೋಂಕಿತರ ಪತ್ತೆಗೆ ಗ್ರಾಮಕ್ಕೆ ಒಬ್ಬರಂತೆ ಶಿಕ್ಷಕರನ್ನು ನಿಯೋಜಿಸಲಾಗಿದೆ. 119 ಶಿಕ್ಷಕರ ಸೇವೆ ಇದಕ್ಕಾಗಿ ಪಡೆಯಲಾಗಿದೆ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು.
ಚೆಕ್‌ಪೋಸ್ಟ್‌ಗಳಿಗೂ ಶಿಕ್ಷಕರ ಮತ್ತು ಅಬಕಾರಿ, ಅರಣ್ಯ ಇಲಾಖೆ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಳ್ಳುವ ಚಿಂತನೆಯಿದೆ. ಈಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.
*ಚಿಂಚೋಳಿ ತಾಲ್ಲೂಕಿನಲ್ಲಿ ಮಿರಿಯಾಣ, ಕೊಳ್ಳೂರು ಮತ್ತು ಕುಂಚಾವರಂಗಳಲ್ಲಿ ಒಟ್ಟು ಮೂರು ಕಡೆ ಪೊಲೀಸ್ ಇಲಾಖೆ ವರದಿ ಆಧರಿಸಿ ಅಗತ್ಯಬಿದ್ದರೆ ಇನ್ನಷ್ಟು ಚೆಕ್‌ಪೋಸ್ಟ್ ತೆರೆಯಲಾಗುವುದು.
–ಅರುಣಕುಮಾರ ಕುಲಕರ್ಣಿ, ತಹಶೀಲ್ದಾರ್, ಚಿಂಚೋಳಿ
*ಮಾಸ್ಕ್ ಇಲ್ಲದೇ ಓಡಾಡುತ್ತಿದ್ದ 68 ಜನರಿಗೆ ದಂಡ ವಿಧಿಸಲಾಗಿದೆ. ಜನರು ಅನಗತ್ಯವಾಗಿ ಮನೆಗಳಿಂದ <br/>ಹೊರ ಬರದೇ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು.
–ಮಹಾಂತೇಶ ಪಾಟೀಲ, ಸರ್ಕಲ್ ಇನಸ್ಪೆಕ್ಟರ್, ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.