ADVERTISEMENT

‘ರೈತರು, ಕಾರ್ಮಿಕರಿಗೆ ಮೋದಿ ಸರ್ಕಾರ ಕಂಟಕ’

ಸಿಪಿಐ 25ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ: ಕೇಂದ್ರದ ವಿರುದ್ಧ ಹರಿಹಾಯ್ದ ಅಮರ್‌ಜೀತ್ ಕೌರ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:22 IST
Last Updated 30 ಆಗಸ್ಟ್ 2025, 18:22 IST
ಕಲಬುರಗಿಯಲ್ಲಿ ಆಯೋಜಿಸಿರುವ ಸಿಪಿಐ 25ನೇ ರಾಜ್ಯ ಸಮ್ಮೇಳನದ ಅಂಗವಾಗಿ ಶನಿವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಮೆರವಣಿಗೆ ನಡೆಸಿದರು  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಅಜಾದ್
ಕಲಬುರಗಿಯಲ್ಲಿ ಆಯೋಜಿಸಿರುವ ಸಿಪಿಐ 25ನೇ ರಾಜ್ಯ ಸಮ್ಮೇಳನದ ಅಂಗವಾಗಿ ಶನಿವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಮೆರವಣಿಗೆ ನಡೆಸಿದರು  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಅಜಾದ್   

ಕಲಬುರಗಿ: ಭಾರತ ಕಮ್ಯುನಿಸ್ಟ್ ಪಕ್ಷದ(ಸಿಪಿಐ) 25ನೇ ರಾಜ್ಯ ಸಮ್ಮೇಳನ ನಾಲ್ಕು ದಶಕಗಳ ಬಳಿಕ ಎರಡನೇ ಬಾರಿಗೆ ಕಲಬುರಗಿಯಲ್ಲಿ ಶನಿವಾರ ಆರಂಭವಾಯಿತು. ಸಮ್ಮೇಳನದ ಅಂಗವಾಗಿ ನಗರದ ಕನ್ನಡ ಭವನದಿಂದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದವರೆಗೆ ಬೃಹತ್ ಮೆರವಣಿಗೆ ನಡೆಯಿತು.

ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಮರಜೀತ್ ಕೌರ್, ‘ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ 11 ವರ್ಷಗಳಲ್ಲಿ ರೈತರು, ಕಾರ್ಮಿಕರು, ಯುವಕರಿಗೆ ಕಂಟಕವಾಗಿದೆ. ರೈತರಿಗೆ ಮರಣಶಾಸನವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ರೈತರ ಸತತ ಒತ್ತಡಕ್ಕೆ ಮಣಿದು ವಾಪಸ್ ತೆಗೆದುಕೊಂಡರೂ ಹಿಂಬಾಗಿಲಿನ ಮೂಲಕ ರೈತ ವಿರೋಧಿಯಾದ, ಕಾರ್ಪೊರೇಟ್ ಪರವಾದ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ’ ಎಂದು ಟೀಕಿಸಿದರು.

‘ಎಡಪಕ್ಷಗಳ ಬೆಂಬಲದೊಂದಿಗೆ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹಳ್ಳಿಯ ಬಡ ಕೂಲಿಕಾರರಿಗೆ ನೆರವಾಗಲು ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ಮೋದಿ ಸರ್ಕಾರ ವರ್ಷದಿಂದ ವರ್ಷಕ್ಕೆ ಈ ಯೋಜನೆಗೆ ನೀಡುತ್ತಿರುವ ಅನುದಾನವನ್ನು ಕಡಿತಗೊಳಿಸುತ್ತಿದೆ’ ಎಂದು ಹರಿಹಾಯ್ದರು.

ADVERTISEMENT

‘ದೇಶವು ಭಾರಿ ಪ್ರಮಾಣದ ನಿರುದ್ಯೋಗವನ್ನು ಎದುರಿಸುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದೂ ಕಾರಣವಾಗಿದೆ. ಮಂಜೂರಾದ ಎಲ್ಲ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಚಿಂತಕ ಪ್ರೊ.ಆರ್.ಕೆ. ಹುಡಗಿ ಮಾತನಾಡಿ, ‘ತಾತ್ಕಾಲಿಕವಾಗಿ ಈಗ ದೇಶದಲ್ಲಿ ಕೋಮುವಾದಿಗಳು ಮುನ್ನಡೆ ಸಾಧಿಸಿದಂತೆ ಕಂಡು ಬಂದರೂ ಭವಿಷ್ಯದಲ್ಲಿ ಅವರು ನೇಪಥ್ಯಕ್ಕೆ ಸರಿಯಲಿದ್ದಾರೆ. ದೇಶಕ್ಕೆ ಬಹಳ ದೀರ್ಘವಾದ ಜಾತ್ಯತೀತ ಪರಂಪರೆ ಇದೆ’ ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ಮಾತನಾಡಿ, ‘1925ರಲ್ಲಿ ಸ್ಥಾಪನೆಯಾದ ಸಿಪಿಐ, ದೇಶದ ದುಡಿಯುವ ಜನರ ಮೊದಲ ರಾಜಕೀಯ ಪಕ್ಷವಾಗಿದೆ. ಹಲವು ನಾಯಕರ, ಕಾರ್ಯಕರ್ತರ ದಿಟ್ಟತನದಿಂದ ಇದೀಗ 100 ವರ್ಷ ಪೂರೈಸುತ್ತಿದೆ. ಶತಮಾನದ ಬಳಿಕವೂ ವರ್ಗ ಕ್ರಾಂತಿಯನ್ನು ನೆರವೇರಿಸಲು ಇನ್ನೂ ಪ್ರಯತ್ನ ನಡೆದಿರುವ ಬಗ್ಗೆ ಬೇಸರವಿದೆ’ ಎಂದು ಹೇಳಿದರು.

ಕಲಬುರಗಿಯಲ್ಲಿ ಶನಿವಾರ ನಡೆದ ಸಿಪಿಐ ರಾಜ್ಯ ಸಮ್ಮೇಳನಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಮರಜೀತ್‌ ಕೌರ್‌ ಅವರು ಕೆಂಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. ಪ್ರೊ.ಆರ್‌.ಕೆ.ಹುಡಗಿ ಮಹೇಶಕುಮಾರ್ ರಾಠೋಡ ಸಿದ್ದನಗೌಡ ಪಾಟೀಲ ರಂಜಾನ್‌ ದರ್ಗಾ ಅಜೀಜ್ ಪಾಷಾ ಸಾತಿ ಸುಂದರೇಶ ಭಾಗವಹಿಸಿದ್ದರು  ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.