
ಕಲಬುರಗಿ: ಭಾರತ ಕಮ್ಯೂನಿಸ್ಟ್ ಪಕ್ಷದಿಂದ (ಮಾರ್ಕ್ಸ್‌ವಾದ) ಬೆಂಗಳೂರಿನಲ್ಲಿ ಡಿಸೆಂಬರ್ 21ರಂದು ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಹೇಳಿದರು.
‘ರ್‍ಯಾಲಿಯಲ್ಲಿ ಎಲ್ಲ ಜಿಲ್ಲೆಗಳಿಂದ 30 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವರು. ಕಲಬುರಗಿ ಜಿಲ್ಲೆಯಿಂದ 2,500 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರೈತರು, ಬಗರಹುಕುಂ ಸಾಗುವಳಿದಾರರು, ಭೂಸ್ವಾಧೀನ ವಿರೋಧಿ ಹೋರಾಟ ನಿರತ ಸಂತ್ರಸ್ತರು, ಸಂಘಟಿತ–ಅಸಂಘಟಿತ ವಲಯದ ಕಾರ್ಮಿಕರು, ಸರ್ಕಾರಿ ವಲಯದ ಗುತ್ತಿಗೆ ನೌಕರರು, ಉದ್ಯೋಗ ಖಾತ್ರಿ ಕಾರ್ಮಿಕರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು ಭಾಗವಹಿಸುವರು’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಜನತೆ ನಿಜವಾದ ಶಿಕ್ಷಕರು ಎಂಬ ಮಾತಿದೆ. ಅದರಂತೆ ಈ ಸಮಾವೇಶಕ್ಕೂ ಮುನ್ನ ನಾವು ಜನರ ನಡುವೆ ಹೋಗಿ ಅವರ ಸಮಸ್ಯೆ ಆಲಿಸಿದ್ದೇವೆ. ಅಭಿಯಾನದ ಭಾಗವಾಗಿ ಜಿಲ್ಲೆಯಲ್ಲಿ 25 ಸಾವಿರ ಮನೆಗಳನ್ನು ತಲುಪಿ, ಕರ ಪತ್ರ, ಕಿರುಪುಸ್ತಕ ವಿತರಿಸಿ ಅರಿವು ಮೂಡಿಸಲಾಗಿದೆ. ಅವರ ಸಮಸ್ಯೆಗಳನ್ನು ಆಲಿಸಲಾಗಿದೆ’ ಎಂದರು.
‘ಮನೆ–ಮನೆಗೆ ಭೇಟಿ ನೀಡಿದ ವೇಳೆ ಜಿಲ್ಲೆಯಲ್ಲಿ ಪ್ರಮುಖವಾಗಿ ಪೋಷಕರು ಹಾಗೂ ಯುವಜನರಿಂದ ನಿರುದ್ಯೋಗ ಸಮಸ್ಯೆ ಹೇಳಿಕೊಂಡಿದ್ದಾರೆ. ಜೊತೆಗೆ ಪ್ರತಿ ಕುಟುಂಬವೂ ಒಂದಿಲ್ಲೊಂದು ಬಗೆಯ ಸಾಲದಲ್ಲೇ ಬದುಕುತ್ತಿರುವುದು ಗೊತ್ತಾಗಿದೆ. ಈ ಎಲ್ಲ ಸಮಸ್ಯೆಗಳ ಜೊತೆಗೆ ಈಗಾಗಲೇ ಪಟ್ಟಿ ಮಾಡಿರುವ 20 ಬಗೆಯ ಬೇಡಿಕೆಗಳ ಈಡೇರಿಕೆಗೆ ಆಡಳಿತಾರೂಢ ಸರ್ಕಾರಗಳಿಗೆ ಹಕ್ಕೊತ್ತಾಯ ಮಾಡಲಾಗುವುದು’ ಎಂದು ಕೆ.ನೀಲಾ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾದ ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಶ್ರೀಮಂತ ಬಿರಾದಾರ, ಗುರು ಚಾಂದಕವಟೆ ಇದ್ದರು.
ಪ್ರತಿಭಟನೆ ಇಂದು
‘ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ನರೇಗಾ ಯೋಜನೆ ಮುಗಿಸಿ ಹಾಕಲು ಹುನ್ನಾರ ರೂಪಿಸಿದೆ’ ಎಂದು ಕೆ.ನೀಲಾ ಟೀಕಿಸಿದರು.
‘ನರೇಗಾ ಯೋಜನೆ ಹೆಸರನ್ನು ವಿಕಸಿತ ಭಾರತ ಜಿ ರಾಮ ಜಿ ಎಂದು ಬದಲಿಸಲು ಮುಂದಾಗಿದೆ. ಜೊತೆಗೆ ಕಾಯ್ದೆಯ ಸ್ವರೂಪವನ್ನು ತೆಗೆದು ಅದನ್ನು ಸ್ಕೀಂ ಆಗಿ ಬದಲಿಸುತ್ತಿದೆ. ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಿದ್ದರೂ ಅದನ್ನು ಪಡೆಯದಂತೆ ತಡೆಯಲು ಅನೇಕ ತಾಂತ್ರಿಕ ಅಡ್ಡಿಗಳನ್ನು ಜಾರಿಗೆ ತರುತ್ತಿದೆ. ಇದನ್ನು ಖಂಡಿಸಿ ಡಿಸೆಂಬರ್ 17ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 11.30ಕ್ಕೆ ಪ್ರತಿಭಟನೆ ನಡೆಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.