ADVERTISEMENT

ಹೋಮ– ಹವನದ ನೆಪದಲ್ಲಿ ವಂಚನೆ: ನಾಲ್ವರ ಬಂಧನ

ಕಾಣೆಯಾದ ವ್ಯಕ್ತಿ ಹುಡುಕಿ ಕೊಡುವುದಾಗಿ ನಂಬಿಸಿ ₹ 4.60 ಲಕ್ಷ ಪಡೆದ ಮಧ್ಯಪ್ರದೇಶದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 4:54 IST
Last Updated 22 ಫೆಬ್ರುವರಿ 2021, 4:54 IST
ಹೋಮ– ಹವನದ ಹೆಸರಲ್ಲಿ ₹ 4.60 ಲಕ್ಷ ವಂಚನೆ ಮಾಡಿದ ನಾಲ್ವರು ಆರೋಪಿಗಳನ್ನು ಆಳಂದ ಪೊಲೀಸರು ಭಾನುವಾರ ಬಂಧಿಸಿದ್ದಾರೆ
ಹೋಮ– ಹವನದ ಹೆಸರಲ್ಲಿ ₹ 4.60 ಲಕ್ಷ ವಂಚನೆ ಮಾಡಿದ ನಾಲ್ವರು ಆರೋಪಿಗಳನ್ನು ಆಳಂದ ಪೊಲೀಸರು ಭಾನುವಾರ ಬಂಧಿಸಿದ್ದಾರೆ   

ಹಿರೋಳಿ (ಆಳಂದ): ಕಾಣೆಯಾದ ವ್ಯಕ್ತಿಯನ್ನು ಹೋಮ- ಹವನದ ಮೂಲಕಹುಡುಕಿ ಕೊಡುವುದಾಗಿ ನಂಬಿಸಿ, ತಾಲ್ಲೂಕಿನ ಹಿರೋಳಿ ಒಂದು ಕುಟುಂಬ ವಂಚಿಸಿದ ಆರೋಪದ ಮೇರೆಗೆ ಒಬ್ಬ ಮಹಿಳೆ ಸೇರಿ ನಾಲ್ವರನ್ನು ಆಳಂದ ಪೊಲೀಸ‌ರು ಭಾನುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ₹ 3.60 ಲಕ್ಷ ಹಣ ಜಪ್ತಿ ಮಾಡಲಾಗಿದೆ.ಸೋನುಸಿಂಗ್ ಗೌಂಡ ಮಲಖಾನ್ ದುಬ್ರೆ, ಬರಸಾಬಾಯಿ ಸೋನುಸಿಂಗ್ ದುಬ್ರೆ, ರಾಹುಲಸಿಂಗ್ ಮನ್ನು ದುಬ್ರೆ, ಅಜಯಸಿಂಗ್ ಬಸಂತ ದುಬ್ರೆ ಬಂಧಿತರು. ಎಲ್ಲರೂಮಧ್ಯಪ್ರದೇಶ ರಾಜ್ಯದ ಸಾಗರ ಜಿಲ್ಲೆಯ ಸಾಹಿಘಡ್ ಗ್ರಾಮದವರು. ಎಲ್ಲರೂ ಒಂದೇ ಕುಟುಂಬದವರಾಗಿದ್ದಾರೆ. ಆಳಂದದ ದರ್ಗಾ ಕ್ರಾಸ್‌ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿರುವಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬಹಿರಂಗ ಗೊಂಡಿದೆ.

ಕಳೆದ ಡಿಸೆಂಬರ್‌ನಲ್ಲಿ ಆಳಂದ ತಾಲ್ಲೂಕಿನ ಹಿರೋಳಿ ಗ್ರಾಮದ ಮೋನಿಕಾ ಕೋಠಾರೆ ಅವರ ಮನೆಗೆ ಸೀರೆ ಮಾರಾಟದ ನೆಪದಲ್ಲಿ ಬಂದಿದ್ದರು. ಈ ಸಂದರ್ಭದಲ್ಲಿ ಕುಟುಂಬದ ಮಹಿಳೆಯೊಬ್ಬರು ತಮ್ಮ ಅಣ್ಣ ಕಾಣೆಯಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ಇದನ್ನು ಕೇಳಿಸಿಕೊಂಡ ಆರೋಪಿಗಳು ಹಣ ಸುಲಿಯುವ ಉಪಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಮ್ಮ ಪರಿಚಯದ ‘ಮಹಾರಾಜ’ರೊಬ್ಬ ಬಳಿ ಇದಕ್ಕೆ ಪರಿಹಾರ ಕಂಡುಕೊಂಡು ಬರುವುದಾಗಿ ಹೇಳಿ ಹೋದ ಆರೋಪಿಗಳು, ಜನವರಿ 1ರಂದು ಮತ್ತೆ ಹಿರೋಳಿ ಗ್ರಾಮಕ್ಕೆ ಬಂದಿದ್ದರು. ಮೋನಿಕಾ ಅವರ ಮನೆಯಲ್ಲಿ ಹೋಮ, ಹವನ, ವಿವಿಧ ಪೂಜೆಗಳನ್ನು ಮಾಡಿ ₹ 4.60 ಲಕ್ಷ ಹಣ ಪಡೆದಿದ್ದರು. ಆದರೆ, ಈ ಪೂಜೆಯಿಂದ ಏನೂ ಪ್ರಯೋಜನವಾಗಿಲ್ಲ ಗೊತ್ತಾದ ಮೇಲೆ ಕುಟುಂಬದವರು ಜ. 19ರಂದು ಮಾದನ ಹಿಪ್ಪರಗಾದಲ್ಲಿ ಠಾಣೆಯಲ್ಲಿ ದೂರು ದಾಖಸಿದ್ದರು.

ಭಾನುವಾರದರ್ಗಾ ಕ್ರಾಸ್‌ ಹತ್ತಿರ ಇವರು ಇರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿಮಿ ಮೆರಿಯಮ್ ಜಾರ್ಜ್, ಹೆಚ್ಚುವರಿ ಎಸ್.‌ಪಿ ಪ್ರಸನ್ನ ದೇಸಾಯಿ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಮಾರ್ಗದರ್ಶನದಲ್ಲಿ ಆಳಂದ ಸಿಪಿಐ ಮಂಜುನಾಥ, ಪಿಎಸ್ಐ ಮಹಾಂತೇಶ ಪಾಟೀಲ, ಇಂದುಮತಿ ಹಾಗೂ ಆಳಂದ, ಮಾದನ ಹಿಪ್ಪರಗಾ ಪೊಲಿಸ್‌ ಸಿಬ್ಬಂದಿ ವಂಚಕರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.