ಕಲಬುರಗಿ: ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಹೋಟೆಲ್ ಭಾಗ್ಯವಂತಿ ದರ್ಶಿನಿಯಲ್ಲಿ ₹50 ಸಾವಿರ ನಗದು ಹಾಗೂ ಒಂದು ಮೊಬೈಲ್ ಕಳುವಾದ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಹೋಟೆಲ್ ವ್ಯಾಪಾರಿ ಸೈದಪ್ಪ ಶಿವಲಿಂಗಪ್ಪ ಧಲ್ಲು ಈ ಕುರಿತು ದೂರು ನೀಡಿದ್ದಾರೆ. ‘ಜ.24ರ ರಾತ್ರಿ 9ರಿಂದ ಜ.25ರ ಬೆಳಿಗ್ಗೆ 5 ಗಂಟೆಯ ಮಧ್ಯೆ ಶೆಟರ್ ಮುರಿದು ಕ್ಯಾಶ್ ಕೌಂಟರ್‌ನಲ್ಲಿದ್ದ ಹಣ ಮತ್ತು ಮೊಬೈಲ್ ಕಳವು ಮಾಡಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜೂಜಾಟ: 7 ಜನರ ಬಂಧನ
ಕಲಬುರಗಿ: ನಗರದ ಹುಮನಾಬಾದ್ ರಿಂಗ್ ರಸ್ತೆ ಹತ್ತಿರದ ಭಾಲ್ಕೇಶ್ವರ ಬಾರ್, ರೆಸ್ಟೋರೆಂಟ್ ಆ್ಯಂಡ್ ಲಾಡ್ಜಿಂಗ್ ಕಟ್ಟಡದ ಮೊದಲನೇ ಮಹಡಿಯ ರೂಮ್‌ನಲ್ಲಿ ಶುಕ್ರವಾರ ಸಂಜೆ ಜೂಜಾಟ ಆಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರವೀಣಕುಮಾರ ಪಂಡರಗಿ, ಸಿದ್ದಪ್ಪ ರೆಡ್ಡಿ, ಮಂಜುನಾಥ ದೇಗಾಂವ, ಜಗದೀಶ ಸಾರಥಿ, ಶಂಕರ ದ್ಯಾಶೆಟ್ಟಿ, ಚನ್ನವೀರ ಹೆಡೆ, ಅನೀಲ ಕಣಸುರ ಬಂಧಿತರು. ಆರೋಪಿಗಳಿಂದ ₹ 17,100 ಸಾವಿರ ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ.
ಸಿಸಿಬಿ ಘಟಕದ ಪಿಐ ಅರುಣಕುಮಾರ, ಸಿಬ್ಬಂದಿ ಶ್ರೈಶೈಲ್, ಅಂಬಾಜಿ, ಪ್ರೀತಮ್, ನಾಗರಾಜ, ಸುನೀಲಕುಮಾರ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
29 ಕ್ವಿಂಟಲ್ ಪಡಿತರ ಅಕ್ಕಿ ವಶ
ಕಲಬುರಗಿ: ನಗರದ ಶಹಾಬಾದ್ ರಿಂಗ್‌ರಸ್ತೆ ಬಳಿ ಗುರುವಾರ ಸಂಜೆ ಬೊಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹99,960 ಮೌಲ್ಯದ 29.40 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
ರಾಮನಗರ ರಿಂಗ್ ರಸ್ತೆಯ ವಾಹನ ಚಾಲಕ ಲಕ್ಷ್ಮಿಕಾಂತ ಅಶೋಕ ಮುದ್ದುಡಗಿ, ಬೇಲೂರಿನ ಅಕ್ಕಿ ಮಾಲೀಕ ಸಿದ್ದು ಭೀಮಶ್ಯಾ ಪೂಜಾರಿ, ಶಹಾಬಾದ್‌ನ ವ್ಯಾಪಾರಿ ಜುನೈದ ನಿಸಾರ ಅವರ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಆಹಾರ ನಿರೀಕ್ಷಕರಾದ ಅರ್ಚನಾ ಕಟ್ಟಿಮನಿ, ಯಲ್ಲಾಲಿಂಗ, ಸಿಬ್ಬಂದಿ ಶಿವರಾಜ ಪೂಜಾರಿ ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.