ADVERTISEMENT

ಕಲಬುರ್ಗಿ: ಗುಂಪು ದಾಳಿ; ಸ್ನೇಹಿತನ ಬರ್ಬರ ಕೊಲೆ

ಗ್ಯಾಂಗ್‌ ವಾರ್‌ ಮಾದರಿಯಲ್ಲಿ ಹೊಡೆದಾಡಿಕೊಂಡ ಸ್ನೇಹಿತರು, ಒಬ್ಬ ಸಾವು, ಇನ್ನೊಬ್ಬನಿಗೆ ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:38 IST
Last Updated 27 ಜುಲೈ 2021, 4:38 IST

ಕಲಬುರ್ಗಿ: ವೈರಿಗಳ ಗುಂಪಿಗೆ ಮಾಹಿತಿ ಸೋರಿಕೆ ಮಾಡಿದ್ದಾನೆ ಎಂಬ ಸಂದೇಹದಿಂದ ದುಷ್ಕರ್ಮಿಗಳ ಗುಂಪೊಂದು, ಭಾನುವಾರ ತಮ್ಮ ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.

ಇಲ್ಲಿನ ದುಬೈ ಕಾಲೊನಿ ನಿವಾಸಿ ಅನಿಲ್ ಭಜಂತ್ರಿ (22) ಕೊಲೆಯಾದ ಯುವಕ. ಈತನ ಸ್ನೇಹಿತ ವಿಜಯಕುಮಾರ್‌ ಎಂಬಾತನ ಮೇಲೆ ಇವರ ವಿರೋಧಿ ಗುಂಪು ಭಾನುವಾರ ಮಧ್ಯಾಹ್ನ ದಾಳಿ ನಡೆಸಿತ್ತು. ಈ ದಾಳಿ ಸಂಚು ರೂಪಿಸಿ ಕೊಟ್ಟಿದ್ದು ಅನಿಲ್‌ ಎಂಬ ಸಂದೇಹದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ: ಅನಿಲ್‌ ಮತ್ತು ಆತನ ಸ್ನೇಹಿತ ಶಹಾಬಜಾರಿನ ವಿಜಯಕುಮಾರ ಸೇರಿದಂತೆ ಐವರು ಗೆಳೆಯರು ಭಾನುವಾರ ಪಟ್ಟಣ ಗ್ರಾಮದ ಬಳಿಯ ದಾಬಾ ಒಂದಕ್ಕೆ ಊಟಕ್ಕೆ ಹೋಗಿದ್ದರು. ವಿಜಯಕುಮಾರ್‌ ಊಟದ ಬಿಲ್‌ ಕೊಡಲು ಕೌಂಟರ್‌ ಬಳಿ ಬಂದಾಗ, ಇವರ ವಿರೋಧಿ ಗುಂಪುನ ಹುಡುಗರಾದ ಕರಣ್‌, ನರಸಿಂಗ್‌ ಮುಂತಾದವರು ಸೇರಿಕೊಂಡು ವಿಜಯಕುಮಾರ್‌ನನ್ನು ಅಪಹರಿಸಿದರು.

ADVERTISEMENT

ಅಲ್ಲಿಂದ ಬಬಲಾದ್‌ ಸ್ಪೇಷನ್‌ ಹತ್ತಿರ ಕರೆದುಕೊಂಡು ಹೋಗಿ ವಿಜಯಕುಮಾರ್‌ನಲ್ಲಿ ಥಳಿಸಿದರು. ಘರ್ಷಣೆಯಲ್ಲಿ ಆತನ ಕಾಲು ತುಂಡರಿಸಿ, ಅಲ್ಲಿಂದ ಪರಾರಿಯಾಯಿತು.

ನೇತಾಡುತ್ತಿದ್ದ ಕಾಲಿನೊಂದಿಗೇ ವಿಜಯಕುಮಾರ್ ಉರುಳಿಕೊಂಡೇ ರಸ್ತೆವರೆಗೂ ಬಂದು ಬಿದ್ದಿದ್ದ. ಇದನ್ನು ಕಂಡು ವಾಹನ ಸವಾರರು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದ್ದರು.

ಇನ್ನೊಂದೆಡೆ, ಅನಿಲ್ ಭಜಂತ್ರಿ ಮತ್ತು ಆತನೊಂದಿಗಿದ್ದ ಸ್ನೇಹಿತರು ವಿಜಯಕುಮಾರಗಾಗಿ ರಾತ್ರಿ 10ರವರೆಗೂ ಹುಡುಕಾಟ ನಡೆಸಿದರು. ಕೊನೆಗೆ ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಜಯಕುಮಾರ ಆರೋಗ್ಯ ವಿಚಾರಿಕೊಂಡು ಭಾನುವಾರ ರಾತ್ರಿ 11.30ರ ಸಮಾರಿಗೆ ಮನೆಗೆ ನಡೆದರು.

ವಿಜಯಕುಮಾರ್‌ನನ್ನು ಹಿಡಿದುಕೊಟ್ಟವರು ಯಾರು ಎಂಬ ಬಗ್ಗೆ ಗೆಳೆಯರ ಗುಂಪಿನಲ್ಲಿ ದಾರಿಯಲ್ಲೇ ಚರ್ಚೆ ಆರಂಭವಾಯಿತು. ಈ ವೇಳೆ ಎಲ್ಲರ ಅನುಮಾನ ಅನುಲ್‌ ಕಡೆಗೆ ತಿರುಗಿತು. ಈ ವೇಳೆ ಅಮಿತ್, ಅಮರೇಶ, ಅಭಿಷೇಕ ಹಾಗೂ ಅಭಯ್ ಎಂಬುವವರು ಸೇರಿಕೊಂಡು ಅನಿಲ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ತೀವ್ರ ರಕ್ತಸ್ರಾವದಿಂದ ಆತ ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಕುವಿನಿಂದ ವ್ಯಕ್ತಿ ಕೊಲೆ
ಕಲಬುರ್ಗಿ:
ಕಳ್ಳತನ ಮಾಡಿ ಜೈಲು ಅನುಭವಿಸಿ ಮರಳಿದ್ದ ವ್ಯಕ್ತಿುಯೊಬ್ಬನನ್ನು ನಗರ ಸಮೀಪದ ಬೋಸಗಾ ಗ್ರಾದಲ್ಲಿ ಸೋಮವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ತಾಜ್‌ಸುಲ್ತಾನಪುರ ಗ್ರಾಮದ ಮಹೇಶ ರಾಜಶೇಖರ ಚಿಡುಗುಂಪಿ (38) ಕೊಲೆಯಾದ ವ್ಯಕ್ತಿ. ಮಹೇಶ ಕೆಲ ವರ್ಷಗಳಿಂದ ಕಲಬುರ್ಗಿ ನಗರದ ಗಾಜಿಪು ಬಡಾವಣೆಯಲ್ಲಿ ವಾಸವಾಗಿದ್ದ. ಕಳ್ಳತನ ಆರೋಪ ಸಾಬೀತಾಗಿದ್ದರಿಂದ ಕೆಲ ವರ್ಷ ಜೈಲಿನಲ್ಲಿದ್ದ ಅವರು, ಈಚೆಗಷ್ಟೇ ಬಿಡಗಡೆಯಾಗಿ ಮನೆಗೆ ಮರಳಿದ್ದ. ಈಗಲೂ ಪೊಲೀಸರ ಎಂಒಬಿ ಪಟ್ಟಿಯಲ್ಲಿದ್ದ.

ದೇಹದ ವಿವಿಧ ಭಾಗಗಳಿಗೆ ಚಾಕು ಇರಿದ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಬೇರೆಲ್ಲೊ ಕೊಲೆ ಮಾಡಿ, ಶವವನ್ನು ಆಟೊದಲ್ಲಿ ತಂದು ಬೋಸಗಾ ಹತ್ತಿರ ಎಸೆದ ಶಂಕೆ ಇದೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಕಮಿಷನರ್ ಡಾ.ರವಿಕುಮಾರ, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸುಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಜೆ.ಎಚ್.ಇನಾಮದಾರ, ಇನ್‍ಸ್ಪೆಕ್ಟರ್ ಭಾಸು ಚವ್ಹಾಣ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇತುವೆಯಿಂದ ಜಿಗಿದು ಮಹಿಳೆ ಆತ್ಮಹತ್ಯೆ
ಕಲಬುರ್ಗಿ:
ನಗರ ಹೊರವಲಯದ ಹುಮನಾಬಾದ್‌ ರಸ್ತೆಯಲ್ಲಿರುವ ಕುರಿಕೋಟಾ ಬಳಿಯ ಸೋಮವಾರ ಸೇತುವೆಯಿಂದ ನದಿಗೆ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಮಾರು 50ರಿಂದ 55 ವರ್ಷದ ಮಹಿಳೆ, ಬಿಳಿ ಬಣ್ಣದ ಮೇಲೆ ಕೆಂಪು ಚುಕ್ಕೆಗಳಿರುವ ಸೀರೆ ಉಟ್ಟಿದ್ದಾರೆ. ಹಣೆಗೆ ದೊಡ್ಡ ಸ್ಟಿಕರ್ ಅಂಟಿಸಿಕೊಂಡಿದ್ದು, ಕೊರಳಲ್ಲಿ ಲಿಂಗದಕಾಯಿ ಇದೆ. ಕೈಯಲ್ಲಿ ಗಾಜಿನ ಹಸಿರುವ ಬಳೆ, ತಲೆಗೆ ಸ್ಕಾರ್ಫ್ ಕಟ್ಟಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರ್ಗಿಯಿಂದ ಬಸ್ಸಿನಲ್ಲಿ ಕುರಿಕೋಟಾಗೆ ಬಂದ ಮಹಿಳೆ, ಸೇತುವೆ ಬಳಿ ಹೋಗಿ ನೀರಿಗೆ ಜಿಗಿದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವ ಹೊರ ತೆಗೆದು ಜಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಸಂಬಂಧಿಕರು ಇದ್ದಲ್ಲಿ ಜಿಮ್ಸ್ ಆಸ್ಪತ್ರೆ ಇಲ್ಲವೇ ಮಹಾಗಾಂವ ಠಾಣೆಯನ್ನು ಸಂಪರ್ಕಿಸಲು ಪಿಎಸ್‍ಐ ಹುಸೇನ್‍ಭಾಷಾ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.