ADVERTISEMENT

ಕಲಬುರಗಿ: ಬೆಚ್ಚಿ ಬೀಳಿಸಿದ ಮಕ್ಕಳ ಕೊಲೆ ಪ್ರಕರಣ, ಅಂತ್ಯಕ್ರಿಯೆಗೂ ಬಾರದ ತಾಯಿ

ಮುಗಿಲು ಮುಟ್ಟಿದ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 5:44 IST
Last Updated 30 ಜೂನ್ 2022, 5:44 IST
ಕೊಲೆಯಾದ ಸೋನಿಯಾ, ಮಯೂರಿ
ಕೊಲೆಯಾದ ಸೋನಿಯಾ, ಮಯೂರಿ   

ಕಲಬುರಗಿ: ಇಲ್ಲಿನ ಹುಮನಾಬಾದ್ ಬೇಸ್‌ನ ಭೋವಿಗಲ್ಲಿ ಮರಗಮ್ಮನ ಗುಡಿ ಸಮೀಪದ ನಿವಾಸಿ ಆಟೊ ಚಾಲಕ ಲಕ್ಷ್ಮಿಕಾಂತ ತನ್ನ ಮಕ್ಕಳಾದ ಸೋನಿಯಾ, ಮಯೂರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ.

ಕೊನೆಯ ಬಾರಿಗೆ ಮಕ್ಕಳ ಮುಖವನ್ನು ನೋಡಲೂ ತಾಯಿ ಅಂಜಲಿ ಬಾರದಿರುವುದು ಸಂಬಂಧಿಕರಲ್ಲಿ ಬೇಸರದ ಜೊತೆ ಅಸಮಾಧಾನಕ್ಕೆ ಕಾರಣವಾಗಿದೆ.

‘ಲಕ್ಷ್ಮಿಕಾಂತ ಹಾಗೂ ಅಂಜಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ನಾಲ್ಕು ಮಕ್ಕಳು. ಸೋನಿಯಾ, ಮಯೂರಿ, ವಿನೀತ್ ಹಾಗೂ ಶ್ರೇಯಾ. ಅಂಜಲಿ ನಾಲ್ಕು ತಿಂಗಳ ಹಿಂದೆ ಪತಿಯಿಂದ ದೂರವಾಗಿದ್ದರು. ಮಕ್ಕಳನ್ನು ತವರು ಮನೆಯವರೇ ಸಾಕುತ್ತಿದ್ದರು. ನಾಲ್ಕು ದಿನಗಳ ಹಿಂದೆ ಪತ್ನಿಯ ತವರು ಮನೆಗೆ ತೆರ ಳಿದ ಲಕ್ಷ್ಮಿಕಾಂತ ಒತ್ತಾಯ ಪೂರ್ವಕ ವಾಗಿ ಕರೆದು ಕೊಂಡು ಬಂದಿದ್ದ. ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಪತ್ನಿಯ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೀರಿಸಿಕೊಳ್ಳಲು ಮುಂದಾದ ಲಕ್ಷ್ಮಿಕಾಂತ ಆಟಕ್ಕೆ ಕರೆದೊಯ್ಯುವ ನೆಪದಲ್ಲಿ ಸೇಡಂ ರಸ್ತೆಯ ವೀರೇಂದ್ರ ಪಾಟೀಲ ಬಡಾವಣೆಯ ಉದ್ಯಾನಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಸೋನಿಯಾ, ಮಯೂರಿ ಆಟವಾಡಿದ ಬಳಿಕ ಆಟೊದಲ್ಲಿ ಕರೆತಂದು ಕೊಲೆ ಮಾಡಿದ. ನಂತರ ಮೃತದೇಹಗಳನ್ನು ಸೀಟಿನ ಹಿಂಬದಿಯಲ್ಲಿ ಹಾಕಿ ಬೆಡ್‌ ಶೀಟ್‌ನಿಂದ ಮುಚ್ಚಿದ’ ಎಂದು ಅವರು ತಿಳಿಸಿದ್ದಾರೆ.

ಸಂಬಂಧಿಗಳ ಆಕ್ರಂದನ: ಮರಣೋತ್ತರ ಪರೀಕ್ಷೆ ನಡೆಸಿ ಮಕ್ಕಳ ಶವಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಲಕ್ಷ್ಮಿಕಾಂತ ಸಂಬಂಧಿಕರ ಆಕ್ರಂದನ ಮನ ಕಲಕುವಂತಿತ್ತು.

‘ಪತಿಯೊಂದಿಗೆ ಸಂಬಂಧವನ್ನು ಬಹುತೇಕ ಕಡಿದುಕೊಂಡಿದ್ದ ಅಂಜಲಿ ಮಕ್ಕಳ ಸಾವಿನ ಸುದ್ದಿ ತಿಳಿಸಿದರೂ, ತಾನು ಅಂತ್ಯಕ್ರಿಯೆಗೆ ಬರುವುದಿಲ್ಲ ಎಂಬುದಾಗಿ ಹೇಳಿದ್ದಾಳೆ’ ಎಂದು ಲಕ್ಷ್ಮಿಕಾಂತ ಸಂಬಂಧಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.