ADVERTISEMENT

ಹೆಸರು, ಸೋಯಾ, ತೊಗರಿಗೆ ಸಂಕಷ್ಟ

ಜಿಲ್ಲೆಯಲ್ಲಿ ಮುಂದುವರಿದ ಮುಂಗಾರು ಮಳೆ ಅಬ್ಬರ: ಹಳದಿ ವರ್ಣಕ್ಕೆ ತಿರುಗುತ್ತಿರುವ ಬೆಳೆ; ತೊಗರಿಗೆ ಕಾಂಡಮಚ್ಚೆ ರೋಗ ಕಾಟ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 6:32 IST
Last Updated 19 ಆಗಸ್ಟ್ 2025, 6:32 IST
ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ರಸ್ತೆಯ ಬದಿಯಲ್ಲಿ ಕೊಯ್ಲಿಗೆ ಬಂದಿರುವ ಹೆಸರು ಬೆಳೆಯ ಕಾಯಿಗಳು ಮಳೆಯ ನೀರಿನಲ್ಲಿ ನೆನೆದಿರುವುದು
ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ರಸ್ತೆಯ ಬದಿಯಲ್ಲಿ ಕೊಯ್ಲಿಗೆ ಬಂದಿರುವ ಹೆಸರು ಬೆಳೆಯ ಕಾಯಿಗಳು ಮಳೆಯ ನೀರಿನಲ್ಲಿ ನೆನೆದಿರುವುದು   

ಕಲಬುರಗಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಸತತ ಮಳೆ ಹೆಸರು, ಸೋಯಾಬೀನ್‌, ತೊಗರಿ ಬೆಳೆಗಳಿಗೆ ಸಂಕಷ್ಟ ತಂದೊಡ್ಡಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 50,136 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆ, 23,962 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್‌ ಹಾಗೂ 6,06,191 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿತ್ತು.

ಜಿಲ್ಲೆಯ ರೋಹಿಣಿ ಮಳೆಗೆ ಬಿತ್ತಿದ್ದ ಹೆಸರು ಬೆಳೆ ರಾಶಿ ಹಂತದಲ್ಲಿದೆ. ಜಿಟಿಜಿಟಿ ಮಳೆಯಿಂದ ಕಾಯಿ ಬಿಡಿಸಲು ಸಾಧ್ಯವಾಗದೇ ಗಿಡದಲ್ಲೇ ಮೊಳಕೆಯೊಡೆಯುತ್ತಿದೆ. ಮತ್ತೊಂದೆಡೆ ಜೂನ್‌ ಮೊದಲ ವಾರದ ನಂತರ
ಬಿತ್ತಿದ್ದ ಹೆಸರು ಬೆಳೆ ಹಾಗೂ ಸೋಯಾಬೀನ್‌ ಬೆಳೆಗಳು ಅಧಿಕ ತೇವಾಂಶದಿಂದ ಹಳದಿ ವರ್ಣಕ್ಕೆ ತಿರುಗುತ್ತಿವೆ. ಇದರಿಂದ ಇಳುವರಿ ಕುಸಿತದ ಆತಂಕ ಅನ್ನದಾತರನ್ನು ಕಾಡುತ್ತಿದೆ.

ADVERTISEMENT

‘ಈ ಭಾಗದ ಪ್ರಮುಖ ಬೆಳೆಯಾದ ತೊಗರಿ ಬೆಳೆಯೂ ಸತತ ಮಳೆಗೆ ನಲುಗಿದೆ. ನಿರಂತರ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿದೆ. ಇದರಿಂದ ಒಂದೆಡೆ ಬೇರು ಕೊಳೆತು ತೊಗರಿ ಒಣಗುತ್ತಿದೆ. ಮತ್ತೊಂದೆಡೆ ಕಾಂಡಕ್ಕೆ ಮಚ್ಚೆಗಳು ಬಿದ್ದು, ಗಿಡ ಟೊಂಕ ಹಂತದಲ್ಲಿ ಮುರಿದು ಒಣಗುತ್ತಿದೆ’ ಎನ್ನುತ್ತಾರೆ ರೈತರು.

‘15 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. ನಾಟಿಗೆ ಚೆನ್ನಾಗಿ ಮೂಡಿ ಎರಡ್ಮೂರು ಗೇಣುಗಳುದ್ದ ಬೆಳೆದಿದ್ದರಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೆ. ಆದರೆ, ಕಳೆದೊಂದು ವಾರದಿಂದ ಸುರಿಯುತ್ತಿರುವ
ಮಳೆಗೆ ಬಹುತೇಕ ಅರ್ಧದಷ್ಟು ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ. ಈ ಬಗೆಗೆ ವಿಮೆ ಕಂಪನಿಗೆ ದೂರನ್ನೂ ನೀಡಿದ್ದು, ಈತನಕ ಸಮೀಕ್ಷೆಗೆ ಬಂದಿಲ್ಲ. ಇನ್ನೊಂದು ವಾರ ಮಳೆ ಮುಂದುವರಿದರೆ ಈಗಿರುವ ಬೆಳೆಯೂ ಕೈಗೆ ಹತ್ತುವುದು ಅನುಮಾನ’ ಎಂದು ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದ ಸುನೀಲ್‌ ನಾಗೂರ ಆತಂಕ ವ್ಯಕ್ತಪಡಿಸಿದರು.

‘ನಾನು ಮೂರು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. ನಿರಂತರ ಮಳೆಯಿಂದ ಸಂಪೂರ್ಣ ಬೆಳೆ ಹಾಳಾಗಿದೆ. ಗೊಬ್ಬರ, ಬೀಜ ಭೂಮಿಗೆ ಹಾಕಿ ಕೈಕಟ್ಟಿ ಕೂತಿದ್ದೇನೆ. ಸರ್ಕಾರವೇ ಹಾನಿಯಾದ ಬೆಳೆಗೆ ಪರಿಹಾರ ನೀಡಿ, ನಮ್ಮಂಥ ರೈತರ ಕೈಹಿಡಿಯಬೇಕು’ ಎಂಬುದು ಅಫಜಲಪುರ ತಾಲ್ಲೂಕಿನ ಬಳ್ಳೂರಗಿ ಗ್ರಾಮದ ರೈತ ಲಕ್ಷಪ್ಪ ಪೂಜಾರಿ ಒತ್ತಾಯ.

ಅತಿವೃಷ್ಟಿಯಿಂದ ಜಿಲ್ಲೆಯ ಹೆಸರು ತೊಗರಿ ಸೋಯಾ ಬೆಳೆಗೆ ಹಾನಿಯಾಗಿದ್ದು ಕೂಡಲೇ ಜಿಲ್ಲಾಡಳಿತ ಜಂಟಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು

18 ದಿನಗಳಲ್ಲಿ 177 ಮಿ.ಮೀ ಮಳೆ

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿತ್ತು. ಮೇ ತಿಂಗಳಲ್ಲಿ ವಾಡಿಕೆಗಿಂತಲೂ 124.9 ಮಿ.ಮೀ ಅಧಿಕ ಮಳೆಯಾಗಿತ್ತು. ಆದರೆ ಜೂನ್‌ ತಿಂಗಳಲ್ಲಿ ವಾಡಿಕೆಗಿಂತಲೂ 37.8 ಮಿ.ಮೀ ಕಡಿಮೆ ಮಳೆಯಾಗಿತ್ತು. ಜುಲೈನಲ್ಲಿ ಮತ್ತೆ ವಾಡಿಕೆಗಿಂತಲೂ 13 ಮಿ.ಮೀ ಅಧಿಕ ಮಳೆಯಾಗಿತ್ತು. ಆಗಸ್ಟ್‌ 18ರ ತನಕ ಜಿಲ್ಲೆಯಲ್ಲಿ ವಾಡಿಕೆಯಂತೆ 96 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ 177 ಮಿ.ಮೀ ಮಳೆ ಬಿದ್ದಿದ್ದು ಶೇ84ರಷ್ಟು ಹೆಚ್ಚುವರಿ ಮಳೆಯಾಗಿದ್ದು ಭೂಮಿಯಲ್ಲಿ ತೇವಾಂಶ ಹೆಚ್ಚಿ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ.

241 ಮನೆಗಳಿಗೆ ಭಾಗಶಃ ಹಾನಿ

‘ಜಿಲ್ಲೆಯಲ್ಲಿ ಜೂನ್‌ 1ರಿಂದ ಆಗಸ್ಟ್‌18ರ ತನಕ ಮಳೆ ಸಂಬಂಧಿತ ಅವಘಡಗಳಲ್ಲಿ ಇಬ್ಬರು ಜೀವಕಳೆದುಕೊಂಡಿದ್ದಾರೆ. ಅಲ್ಲದೇ ದೊಡ್ಡ ಪ್ರಾಣಿಗಳು ಸೇರಿ 15 ಜಾನುವಾರುಗಳ ಜೀವಹಾನಿಯಾಗಿದೆ. ಎರಡು ಮನೆಗಳು ಸಂಪೂರ್ಣ ಬಿದ್ದಿದ್ದು 241 ಮನೆಗಳು ಭಾಗಶಃ ಬಿದ್ದಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ತೊಗರಿಗೆ ಕಾಂಡಮಚ್ಚೆ ರೋಗ’

‘ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಬೇರು ಕೊಳೆರೋಗ ಹಾಗೂ ಕಾಂಡ ಮಚ್ಚೆ ರೋಗ ಕಾಣಿಸಿದೆ. ತೇವಾಂಶ ಹೆಚ್ಚಳದಿಂದ ಹೆಚ್ಚೆಂದರೆ ಶೇ2ರಷ್ಟು ಬೆಳೆಗೆ ಸಮಸ್ಯೆಯಾಗಿದೆ. ರೈತರು ಜಮೀನುಗಳಲ್ಲಿ ನಿಂತ ನೀರನ್ನು ಬಸಿಗಾವಲೆ ಮೂಲಕ ಹೊಲಗಳಿಂದ ಹೊರಹಾಕಬೇಕು. ಜೊತೆಗೆ ಪ್ರತಿ ಲೀಟರ್‌ಗೆ 2 ಗ್ರಾಂ ರಿಡೋಮಿಲ್‌ ಸೇರಿಸಿ ಕಾಂಡಕ್ಕೆ ಸಿಂಪಡಿಸಬೇಕು’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್‌ ಸಲಹೆ ನೀಡಿದ್ದಾರೆ.  ‘ತೇವಾಂಶ ಹೆಚ್ಚಳ ಹಾಗೂ ಬಿಸಿಲಿನ ಕೊರತೆಯಿಂದ ಹೆಸರು ಉದ್ದು ಹಾಗೂ ಮೆಕ್ಕೆಜೋಳದಂಥ ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿವೆ. ಕಬ್ಬಿಣಾಂಶ ಮೆಗ್ನೀಸಿಯಂ ಕೊರತೆ ಇದಕ್ಕೆ ಕಾರಣ. ಅಂಥ ಬೆಳೆಗಳಿಗೆ ನ್ಯಾನೋ ಯೂರಿಯಾ ಸಿಂಪಡಿಸಿದರೆ ಬೆಳೆ ಸರಿಯಾಗುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.