ಕಲಬುರಗಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವಲ್ಲಿ ವಿಫಲವಾಗಿದೆ. ರೈತರು ಮುಂಗಾರು ಬೆಳೆಗಳಿಗೆ ವಿಮೆ ಪ್ರೀಮಿಯಂ ಭರಿಸಿ ಬೆಳೆ ವಿಮೆ ನೋಂದಾಯಿಸಿದ್ದಾರೆ. ಬೆಳೆದು ನಿಂತಿದ್ದ ಫಸಲಿಗೆ ಪ್ರಕೃತಿ ವಿಕೋಪದಿಂದ ಹಾನಿಯಾದರೂ ರೈತರು ಪರಿಹಾರ ಸಿಗದೇ ಪರದಾಡುವಂತಾಗಿದೆ.
ಕಲಬುರಗಿ ಸೇರಿದಂತೆ ರಾಜ್ಯದ 9 ಜಿಲ್ಲೆಗಳ ಬೆಳೆ ವಿಮೆಯ ಹೊಣೆ ಹೊತ್ತ ಸೋಂಪೊ ಜನರಲ್ ಇನ್ಶುರನ್ಸ್ ಕಂಪನಿಗೆ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ರೈತರು ಮುಂಗಾರಿನ ಅಲ್ಪಾವಧಿ ಉದ್ದು, ಹೆಸರು ಮತ್ತು ದೀರ್ಘಾವಧಿಯ ತೊಗರಿ ಬೆಳೆಗೆ ವಿಮೆ ನೋಂದಾಯಿಸಿದ್ದಾರೆ.
ವಿಮಾ ಯೋಜನೆ ಮಾರ್ಗಸೂಚಿಯಂತೆ ಬೆಳೆ ವಿಮೆ ನೋಂದಾಯಿಸಿದ ರೈತರು ತಮ್ಮ ಹೊಲದಲ್ಲಿನ ಬೆಳೆ ಪ್ರಕೃತಿ ವಿಕೋಪ ಅಥವಾ ಇನ್ನಾವುದೇ ರೀತಿಯಲ್ಲಿ ಹಾನಿಗೆ ಒಳಗಾದರೆ ಘಟನೆ ನಡೆದ 72 ಗಂಟೆಗಳ ಒಳಗಾಗಿ ವಿಮೆ ಕಂಪನಿಗೆ ದೂರವಾಣಿ ಮೂಲಕ ದೂರು ದಾಖಲಿಸಬೇಕು. ಅದರಂತೆ ಜಿಲ್ಲೆಯ 35 ಸಾವಿರ ರೈತರು ದೂರು ದಾಖಲಿಸಿದ್ದಾರೆ. ಆದರೆ ಹೀಗೆ ದೂರು ದಾಖಲಿಸಿದ ರೈತರಿಗೆ ವಿಮಾ ಪರಿಹಾರ ರೂಪದಲ್ಲಿ ಅವರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿರುವ ಮೊತ್ತವು ನಗೆಪಾಟಲಿಗೆ ಈಡಾಗಿದೆ!
ಈ ಮೊತ್ತ ಕನಿಷ್ಠ ₹ 250, ಕೆಲವರಿಗೆ ₹ 450, ₹ 900 ಹೀಗೆ ಅತ್ಯಲ್ಪ ಪರಿಹಾರ ನೀಡಿದ್ದು ಇದು ರೈತರು ತಮ್ಮ ಜಮೀನಿನ ಬೆಳೆ ವಿಮೆಗೆ ಒಳಪಡಿಸಲು ಭರಿಸಿದ ಪ್ರಿಮಿಯಂ ಮೊತ್ತಕ್ಕಿಂತಲೂ ಕಡಿಮೆಯಾಗಿದೆ.
ಹೀಗೆ ದೂರು ದಾಖಲಿಸಿದ ಮೇಲೆ ವಿಮಾ ಕಂಪನಿಯ ಅಧಿಕಾರಿಗಳು ರೈತರ ಹೊಲಗಳಿಗೆ ಬಂದು ಪರಿಶೀಲಿಸಿ ಬೆಳೆ ಹಾಳಾದ ಕುರಿತು ವಿಡಿಯೊ, ಜಿಪಿಎಸ್ ಅಳವಡಿಸಿ ಫೋಟೊ ತೆಗೆದುಕೊಂಡು ರೈತರ ಸಮ್ಮುಖದಲ್ಲಿ ವರದಿ ದಾಖಲಿಸಿ ಅದರ ಮೇಲೆ ರೈತರ ಸಹಿ ಪಡೆದು ಬೆಳೆ ಹಾನಿಯ ಅಂದಾಜು ನಮೂದಿಸಿ ಸಂಬಂಧಿಸಿದವರಿಗೆ ಕಳುಹಿಸಿಕೊಟ್ಟಿದ್ದಾರೆ. ಇಷ್ಟಾದರೂ ರೈತರಿಗೆ ಬೆಳೆ ಹಾನಿಗೆ ಪರಿಹಾರ ಮಾತ್ರ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.
ಯಾಕೆ ಹೀಗೆ?
ವಿಮೆ ಮಾಡಿಸಿದ ರೈತರಲ್ಲಿ ಶೇ 25ಕ್ಕಿಂತ ಹೆಚ್ಚು ಕ್ಲೇಮ್ ಸೆಟಲ್‌ಮೆಂಟ್ ದೂರುಗಳು ಬಂದಿದ್ದರಿಂದ ಕಂಪನಿಯ ವಿಮಾ ಯೋಜನೆಯ ಮಾರ್ಗಸೂಚಿಯಂತೆ ಗ್ರಾಮ ಪಂಚಾಯತ್‌ವಾರು ಸ್ಯಾಂಪಲ್ ಸರ್ವೆ ಮಾಡಿ ಅದರ ಮೂಲಕ ರೈತರಿಗೆ ಪರಿಹಾರ ಮಂಜೂರು ಮಾಡಲಾಗಿದೆ ಎನ್ನುತ್ತವೆ ಕಂಪನಿಯ ಮೂಲಗಳು.
ಆದರೆ. ಇದರಿಂದ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯ ಮೂಲ ಉದ್ದೇಶವೇ ಈಡೇರದಂತಾಗಿದೆ. ಹೀಗಾದರೆ ಬೆಳೆ ವಿಮೆ ನೋಂದಾಯಿಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿರುವ ಚಿಂಚೋಳಿಯ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ, ವಿಮೆ ಮಾಡಿಸಿದರೂ ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಗೆ ಪರಿಹಾರವಿಲ್ಲ ಎಂದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂದು ಪ್ರಶ್ನಿಸುತ್ತಾರೆ.
ವಿಮೆ ಪರಿಹಾರ ಬಂದಿಲ್ಲ: ‘ನಾನು ಬೆಳೆ ವಿಮೆ ನೋಂದಾಯಿಸಿದ್ದೇನೆ. ವಿಮಾ ಪರಿಹಾರ ಬಂದಿಲ್ಲ. ಆದರೆ ರಾಜ್ಯ ಸರ್ಕಾರ ನೀಡಿದ ಪರಿಹಾರ ಲಭಿಸಿದೆ. ವಿಮೆ ಪರಿಹಾರ ಖಾತ್ರಿ ಇಲ್ಲ ಎಂದರೆ ವಿಮೆ ತನ್ನ ಅರ್ಥ ಕಳೆದುಕೊಳ್ಳುತ್ತಿದೆ‘ ಎಂದು ರೈತ ಮಲ್ಲಿಕಾಜುನ ಕೋರಿ ಮತ್ತು ಚನ್ನಬಸಪ್ಪ ಗಂಜಗಿರಿ ದೂರುತ್ತಾರೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಲ್ಲಿ ಚಿಂಚೋಳಿ ತಾಲ್ಲೂಕಿನಲ್ಲಿ ಅಂದಾಜು 40 ಸಾವಿರ ಹೆಕ್ಟೇರ್ ಹಾಳಾಗಿದೆ. ಹೀಗೆ ಹಾಳಾದ ಬೆಳೆ ಕುರಿತು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ವರದಿ ಸಲ್ಲಿಸಿದ್ದಾರೆ.
ಇದನ್ನು ಆಧರಿಸಿ ರಾಷ್ಟ್ರೀಯ ಮತ್ತು ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಹಣ ಬಿಡುಗಡೆಯಾಗಿ ರೈತರ ಖಾತೆಗೆ ಜಮೆ ಆಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಬಗೆಗೆ ವಿಶೇಷ ಮುತುವಜಿ ವಹಿಸಿ ದುಪ್ಪಟ್ಟು ಪರಿಹಾರ ನೀಡಿರುತ್ತಾರೆ.
ಕುಂಟು ನೆಪ: ವಿಮೆ ನೋಂದಾಯಿಸಿದ ರೈತರು ಹೆಚ್ಚು ದೂರು ದಾಖಲಿಸಿದ್ದರಿಂದ ನಾವು ಸ್ಯಾಂಪಲ್ ಸರ್ವೆ ಆಧರಿಸಿ ಪರಿಹಾರ ನೀಡುತ್ತಿದ್ದೇವೆ ಎನ್ನುವ ಅಧಿಕಾರಿಗಳ ಕುಂಟು ನೆಪ ಅಸಮಂಜಸವಾಗಿದೆ. 2020–21ನೇ ಸಾಲಿನಲ್ಲಿ ವಿಮೆ ನೋಂದಾಯಿಸಿ ಬೆಳೆ ಹಾನಿಯ ದೂರು ಸಲ್ಲಿಸಿದ ರೈತರ ಹೊಲವನ್ನು ವಿಮೆ ಕಂಪನಿಯ ಅಧಿಕಾರಿಗಳು ಪರಿಶೀಲಿಸಿ ಸಚಿತ್ರ ವರದಿ
ಸಲ್ಲಿಸಿದ ನಂತರ 2021 ಜನವರಿ ತಿಂಗಳಲ್ಲಿಯೇ ಬೆಳೆ ಹಾನಿಗೆ ವಿಮೆ ಕಂಪನಿ ಉತ್ತಮ ಪರಿಹಾರ
ನೀಡಿತ್ತು. ಇದರಿಂದ ಉತ್ತೇಜಿತರಾದ 70 ಸಾವಿರಕ್ಕೂ ಅಧಿಕ ರೈತರು
2021–22ರಲ್ಲಿ ವಿಮೆ ನೋಂದಾಯಿಸಿದ್ದಾರೆ. ಅತಿವೃಷ್ಟಿ, ಪ್ರವಾಹ, ಮಂಜು ಸುರಿದು ಹೂ ಉದುರುವಿಕೆ ಮತ್ತು ಅಧಿಕ ತೇವಾಂಶದಿಂದ ಗೊಡ್ಡು ರೋಗ ಉಲ್ಬಣಿಸಿತ್ತು. ಇದರಿಂದ ಬೆಳೆ ಹಾಳಾದರೂ ವಿಮೆ ಪರಿಹಾರ
ಸಿಗದೇ ರೈತರು ಕಂಗಾಲಾಗಿದ್ದಾರೆ.
’ಕೇವಲ ₹ 716 ಪರಿಹಾರ‘
ಹೂಡದಳ್ಳಿ ಗ್ರಾಮದ ಸ.ನಂ. 83ರಲ್ಲಿ 3 ಎಕರೆ 7 ಗುಂಟೆ ಹಾಗೂ ಸ.ನಂ.84ರಲ್ಲಿ 4 ಎಕರೆ 34 ಗುಂಟೆ ಜಮೀನಿನಲ್ಲಿ ತೊಗರಿ ಬೆಳೆಗೆ ವಿಮೆ ನೋಂದಾಯಿಸಿದ್ದೇನೆ. ಒಟ್ಟು 8 ಎಕರೆ 1 ಗುಂಟೆ ಜಮೀನಿಗೆ ₹ 716 ಪರಿಹಾರ ಬಂದಿದೆ.
–ರವಿಕುಮಾರ ಹೂಡದಳ್ಳಿ, ರೈತ, ಚಿಂಚೋಳಿ
‘ಎರಡು ಅರ್ಜಿ ತಿರಸ್ಕಾರ‘
‘ನನ್ನ ಗೌಡನಹಳ್ಳಿಯ ಜಮೀನಿನ 32 ಎಕರೆಗೆ ಬೆಳೆ ವಿಮೆ ಮಾಡಿಸಿದ್ದೇನೆ. ಇದರಲ್ಲಿ ಎರಡು ಅರ್ಜಿ ತಡವಾಗಿ ದೂರು ಸಲ್ಲಿಸಲಾಗಿದೆ ಎಂದು ವಿಮಾ ಕಂಪನಿಯವರು ತಿರಸ್ಕರಿಸಿದ್ದಾರೆ. 2 ಎಕರೆ 28 ಗುಂಟೆಗೆ ₹ 10,091.93 ಪರಿಹಾರ ಬಂದಿದೆ. ಇನ್ನೂ ಎರಡು ಅರ್ಜಿಗಳು ಪ್ರಕ್ರಿಯೆಯಲ್ಲಿವೆ.
–ಭೋಗೇಶ್ವರರಾವ್ ಪಂಚಾಳ, ರೈತ ಚಿಂಚೋಳಿ
‘6ರಂದು ಜಿಲ್ಲಾಧಿಕಾರಿಗಳ ಸಭೆ’
ರೈತರು ಪಾವತಿ ಮಾಡಿದ ಪ್ರಿಮಿಯಂಗಿಂತಲೂ ಕಡಿಮೆ ಪರಿಹಾರ ಬಂದಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ವಿಚಾರಿಸಿದಾಗ ಸಾಫ್ಟ್‌ವೇರ್ ದೋಷದಿಂದ ಹೀಗಾಗಿದೆ ಎಂದು ವಿಮಾ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಅಂತಿಮವಾಗಿ ಪಾವತಿಸಿದ ವಿಮಾ ಹಣದ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಅವರು ಏಪ್ರಿಲ್ 6ರಂದು ವಿಮಾ ಕಂಪನಿ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದಿದ್ದು, ಆ ಸಭೆಯಲ್ಲಿ ವಿಮಾ ಕಂಪನಿಯ ಪ್ರಧಾನ ವ್ಯವಸ್ಥಾಪಕರೂ ಭಾಗವಹಿಸಲಿದ್ದಾರೆ.
–ಡಾ. ರತೇಂದ್ರನಾಥ ಸೂಗುರ, ಜಂಟಿ ಕೃಷಿ ನಿರ್ದೇಶಕ
‘ಹೋರಾಟಕ್ಕೆ ಸಿದ್ಧತೆ’
ಕಳೆದ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಹೊಲಗಳಲ್ಲಿ ನೀರು ನಿಂತಿತ್ತು. ಬೆಳೆದ ಬೆಳೆಯು ಕೊಳೆತು ಹೋಗಿತ್ತು. ಹೀಗಾಗಿ, ಅದನ್ನು ಹರಗಿ ಮತ್ತೆ ಬೇರೆ ಬಿತ್ತನೆ ಮಾಡಬೇಕಾಯಿತು. ಕೆಲವು ರೈತರು ಮೂರು ಬಾರಿ ಬೀಜ ಮುರಿದು ಬಿತ್ತಿದ್ದಾರೆ. ಇದಕ್ಕಾಗಿ ಬೆಳೆ ವಿಮೆ ಮಾಡಿಸಿದರೂ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಕಂಪನಿ ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲ. ಯಾರನ್ನು ಭೇಟಿ ಮಾಡಬೇಕು. ಅವರ ಕಚೇರಿ ಎಲ್ಲಿದೆ ಎಂಬುದೂ ಹಲವು ರೈತರಿಗೆ ಗೊತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದೇವೆ.
–ಗಣಪತರಾವ್ ಮಾನೆ, ಜಿಲ್ಲಾ ಅಧ್ಯಕ್ಷ, ರೈತ ಕೃಷಿ ಕಾರ್ಮಿಕ ಸಂಘಟನೆ
‘ಬಂದ ಅರ್ಜಿಗಳ ಪರಿಶೀಲನೆ’
ರೈತರಿಂದ ಬೆಳೆ ನಷ್ಟ ಪರಿಹಾರ ಕೋರಿ ಬಂದ ಅರ್ಜಿಗಳನ್ನು ನಮ್ಮ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಈ ಬಗ್ಗೆ ಏನೇ ಸಂದೇಹಗಳಿದ್ದರೂ ರೈತರು ಕಲಬುರಗಿಯ ರೈಲ್ವೆ ಸ್ಟೇಶನ್ ಬಳಿ ಇರುವ ಕಚೇರಿಯನ್ನು ಸಂಪರ್ಕಿಸಬಹುದು.
ಯೂನಿವರ್ಸಲ್ ಸೋಂಪು ವಿಮಾ ಕಂಪನಿ ಪ್ರತಿನಿಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.