ADVERTISEMENT

ಶಹಾಬಾದ್: ಅಪಾರ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 3:18 IST
Last Updated 18 ಸೆಪ್ಟೆಂಬರ್ 2020, 3:18 IST
ಶಹಾಬಾದ್ ತಾಲ್ಲೂಕಿನಲ್ಲಿ ಅಜನಿ ಹಳ್ಳದ ಸಣ್ಣ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದು
ಶಹಾಬಾದ್ ತಾಲ್ಲೂಕಿನಲ್ಲಿ ಅಜನಿ ಹಳ್ಳದ ಸಣ್ಣ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದು   

ಶಹಾಬಾದ್:ತಾಲ್ಲೂಕಿನಲ್ಲಿ ಜೀವನದಿ ಕಾಗಿಣಾ ಮತ್ತು ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ನದಿ ದಂಡೆಯ ಹಳ್ಳಿಗಳಾದ ಮುತ್ತಗಿ, ಭಂಕೂರ, ಶಂಕರವಾಡಿ, ಗೋಳಾ, ಹೊನಗುಂಟಾ ವ್ಯಾಪ್ತಿಯ ಹೊಲಗಳಲ್ಲಿ ನೀರು ತುಂಬಿಕೊಂಡಿದೆ.

ವಿವಿಧ ಬೆಳೆಗಳು ಕೊಳೆಯತೊಡಗಿದ್ದು ಶೀಘ್ರ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಸಂಚಾರ ಅಸ್ತವ್ಯಸ್ತ: ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಅಜನಿ ಹಳ್ಳದ ಸಣ್ಣ ಸೇತುವೆ ಮುಳುಗಿಗಿದೆ. ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆಯ ಮೇಲಿರುವ ತಗ್ಗುಗಳಲ್ಲಿ ನೀರು ತುಂಬಿಕೊಂಡಡು ಸಂಚಾರ ದುಸ್ತರವಾಗಿದೆ.

ADVERTISEMENT

ಅಶೋಕ ನಗರದಲ್ಲಿ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಜಮಾವಣೆಯಾಗಿ ತೊಂದರೆಯಾಯಿತು. ಪಠಾಣ ಗಲ್ಲಿಯ ಕೆಲವೊಂದು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಎಲ್ಲಿಲ್ಲದ ಸಂಕಷ್ಟ ಅನುಭವಿಸಿದರು.

ಮುತ್ತಗಾ, ಶಂಕರವಾಡಿ ಹಾಗೂ ಗೋಳಾ(ಕೆ) ಗ್ರಾಮಗಳಲ್ಲಿ ಕಾಗಿಣಾ ನದಿಗೆ ಕಟ್ಟಿದ ಬ್ರಿಡ್ಜ್ ಕಮ್ ಬ್ಯಾರೇಜ್ ಸಂಪೂರ್ಣ ತುಂಬಿಕೊಂಡು ಸೇತುವೆ ಮೇಲಿಂದ ನೀರು ಹರಿಯುತ್ತಿದೆ.

ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಸತತವಾಗಿ ಮಳೆಯಾಗುತ್ತಿರುವುದರಿಂದ ಬೆಣ್ಣೆತೊರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದರಿಂದ ಸುಮಾರು 25 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ.

ಗೋಳಾ (ಕೆ) ಗ್ರಾಮದಿಂದ ವಾಡಿ, ಭಂಕೂರದಿಂದ ಮುತ್ತಗಾ ಗ್ರಾಮಕ್ಕೆ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಮಳಖೇಡದ ಸೇತುವೆ ಮುಳುಗಡೆಯಾಗಿದ್ದರಿಂದ ಕೆಲವು ವಾಹನಗಳು ನಗರದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.