ADVERTISEMENT

ಸದೃಢ ಸಮಾಜದ ಹಿಂದಿನ ಶಕ್ತಿ ಮಹಿಳೆ: ಸಿ.ಎಸ್.ಷಡಾಕ್ಷರಿ

ಮೇರಿ ದೇವಾಸಿಯಾ ಸೇವಾ ಪುರಸ್ಕಾರ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:47 IST
Last Updated 19 ಫೆಬ್ರುವರಿ 2026, 4:47 IST
ಕಲಬುರಗಿಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು
ಕಲಬುರಗಿಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು   

ಕಲಬುರಗಿ: ‘ಸದೃಢ ಸಮಾಜ ನಿರ್ಮಾಣ ಆಗಬೇಕು. ಒಂದೊಳ್ಳೆ ಕುಟುಂಬ ನೆಮ್ಮದಿಯಾಗಿ ಬದುಕಬೇಕು ಎಂದರೆ ಅದರ ಹಿಂದಿರುವ ಶಕ್ತಿ ಮಹಿಳೆ ಆಗಿರುತ್ತಾಳೆ. ಮಹಿಳೆಯರು ಉತ್ತಮ ಸಮಾಜ ನಿರ್ಮಾಣದ ನಿಜವಾದ ವಾಸ್ತುಶಿಲ್ಪಿಗಳು’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದಿಂದ ಋತುಚಕ್ರ ರಜೆ/ ಇತರೆ ಸೌಲಭ್ಯಕ್ಕೆ ಕಾರಣಿಕರ್ತರಾದ ಪ್ರಯುಕ್ತ ತಮಗೆ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ಸಾಧಕ ಮಹಿಳೆಯರಿಗೆ ‘ಮೇರಿ ದೇವಾಸಿಯಾ ಸೇವಾ ಪುರಸ್ಕಾರ’ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಮಹಿಳೆಯರ ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ಕಂಡವರಲ್ಲಿ ನಾವು ಮೊದಲಿಗರು. ಮಹಿಳಾ ನೌಕರರ ವಿಚಾರದಲ್ಲಿ ಅಭಿಮಾನ, ಗೌರವ, ಅನುಕಂಪ, ಸಹನಾಭೂತಿಯೂ ಇದೆ. ಸಹಕಾರ ಕೂಡ ಕೊಡುತ್ತಿದ್ದೇವೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಮಹಿಳೆಯರ ಶೋಷಣೆಯ ಪ್ರಕರಣಗಳು ಹೆಚ್ಚುತ್ತಿದ್ದು, ಒಟ್ಟಾರೆ ಪ್ರಕರಣಗಳಲ್ಲಿ ಶೇ 32ರಷ್ಟು ಮಹಿಳಾ ಶೋಷಣೆಯ ಪ್ರಕರಣಗಳಿವೆ. ಸಂಘ ಇವುಗಳ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ.ನಮೋಶಿ ಮಾತನಾಡಿ, ‘ಶಿಕ್ಷಕರ ಪ್ರತಿನಿಧಿಯಾಗಿ ನೌಕರರ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸದನದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡುತ್ತಿದ್ದೇನೆ. ಮಹಿಳಾ ನೌಕರರು ಸಂಘಟಿತರಾಗಬೇಕು. ತಮ್ಮ ಕರ್ತವ್ಯದ ಜೊತೆಗೆ ಸಮಾಜ ಸೇವೆ ಮಾಡಬೇಕು’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ತುಂಬಾ ಕಡಿಮೆ ಆಗಿದೆ. ಖಾಲಿ ಹುದ್ದೆಗಳೇ ಇದಕ್ಕೆ ಕಾರಣ. ಇವುಗಳನ್ನು ಸರ್ಕಾರ ಭರ್ತಿ ಮಾಡಿದರೆ ನೌಕರರು ಶ್ರಮ ಹಾಕಿ‌, ಒಳ್ಳೆಯ ಫಲಿತಾಂಶ ತರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ‘ಈ ಬಾರಿಯೂ ಕೂಡ ಪ್ರಖರ ಬಿಸಿಲಿನ ಮಾಹಿತಿ ಇದ್ದು, ನೌಕರರು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಕಚೇರಿ ಅವಧಿ ಬದಲಾವಣೆಗೆ ಷಡಾಕ್ಷರಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದರು.

ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ದಾಕ್ಷಾಯಣಿ ಎಸ್.ಅಪ್ಪ ಉದ್ಘಾಟಿಸಿದರು. ಆಳಂದನ ಸಿದ್ದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಂದಿನಿ ಸನಬಾಳ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಸ್ಥಾ‍ಪಿಸಿದ ಮೇರಿ ದೇವಾಸಿಯಾ ಅವರ ಹೆಸರಿನಲ್ಲಿ ಸಾಧಕರಿಗೆ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಲಾವಿದ ಸಿದ್ದಣ್ಣ ಕುಂಬಾರ ಮೂಗಿನಿಂದ ಕೊಳಲು‌ ನುಡಿಸಿದರು.

ಪ್ರಭಾರ ಡಿಡಿಪಿಐ ಶಂಕ್ರಮ್ಮ ಢವಳಗಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಗಿರಿಗೌಡ, ಗೌರವಾಧ್ಯಕ್ಷ ಎಸ್‌.ಬಸವರಾಜು, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ.ಬಳ್ಳಾರಿ, ಸುರೇಶ ಸಿ.ಶೆಡಶ್ಯಾಳ, ಶ್ರೀಮಂತ ಪಟ್ಟೇದಾರ, ಮಹೇಶ ಹೂಗಾರ, ಧರ್ಮರಾಯ ಜವಳಿ, ಜ್ಯೋತಿ ಮರಗೋಳ, ಚಂದ್ರಕಾಂತ ಏರಿ, ಸಂಘದ ಜಿಲ್ಲಾ ಉಪಾಧ್ಯಕ್ಷೆ ವಿಶಾಲಾಕ್ಷಿ ಎಸ್., ಕೋಶಾಧ್ಯಕ್ಷೆ ಜಮುನಾ ಟಿಳೆ, ಡಾ.ರವಿಕಾಂತಿ ಕ್ಯಾತನಾಳ, ರಾಜೇಶ್ವರಿ ತಪಲಿ ಇತರರಿದ್ದರು. ಪ್ರಧಾನ ಕಾರ್ಯದರ್ಶಿ ಸವಿತಾ ಬಿ.ನಾಶಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.