ADVERTISEMENT

ಸಾಂಸ್ಥಿಕ ಸ್ವಾಯತ್ತತೆಗೆ ಉತ್ತೇಜನ: ಯುಜಿಸಿ ಅಧ್ಯಕ್ಷ ಡಾ.ಡಿ.ಪಿ.ಸಿಂಗ್

ಕರ್ನಾಟಕ ಕೇಂದ್ರೀಯ ವಿ.ವಿ. ಘಟಿಕೋತ್ಸವ ದಿಕ್ಸೂಚಿ ಭಾಷಣದಲ್ಲಿ ಯುಜಿಸಿ ಅಧ್ಯಕ್ಷ ಡಾ.ಡಿ.ಪಿ.ಸಿಂಗ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 11:29 IST
Last Updated 23 ಸೆಪ್ಟೆಂಬರ್ 2020, 11:29 IST
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್. ಎಂ. ಮಹೇಶ್ವರಯ್ಯ ಅವರು ಜಾನಪದ ವಿದ್ವಾಂಸ ಮ.ಗು. ಬಿರಾದಾರ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಬಿ.ಆರ್. ಕೆರೂರ, ಸಮಕುಲಪತಿ ಪ್ರೊ.ಜಿ.ಆರ್.ನಾಯಕ ಹಾಗೂ ಕುಲಸಚಿವ ಪ್ರೊ. ಮುಷ್ತಾಕ್ ಅಹ್ಮದ್ ಐ ಪಟೇಲ್ ಇದ್ದರು
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್. ಎಂ. ಮಹೇಶ್ವರಯ್ಯ ಅವರು ಜಾನಪದ ವಿದ್ವಾಂಸ ಮ.ಗು. ಬಿರಾದಾರ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಬಿ.ಆರ್. ಕೆರೂರ, ಸಮಕುಲಪತಿ ಪ್ರೊ.ಜಿ.ಆರ್.ನಾಯಕ ಹಾಗೂ ಕುಲಸಚಿವ ಪ್ರೊ. ಮುಷ್ತಾಕ್ ಅಹ್ಮದ್ ಐ ಪಟೇಲ್ ಇದ್ದರು   

ಕಲಬುರ್ಗಿ: ಸುಮಾರು 34 ವರ್ಷಗಳ ಬಳಿಕ ಭಾರತ ಸರ್ಕಾರ ‘ಹೊಸ ಶಿಕ್ಷಣ ನೀತಿ’ಯನ್ನು ಅಳವಡಿಸಿಕೊಂಡಿದೆ. ಇದರನ್ವಯ ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ಸಾಂಸ್ಥಿಕ ಸ್ವಾಯತ್ತತೆ ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಡಾ.ಡಿ.ಪಿ. ಸಿಂಗ್ ಪ್ರತಿಪಾದಿಸಿದರು.

ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಆನ್‌ಲೈನ್ ಮೂಲಕ ದೆಹಲಿಯಿಂದ ದಿಕ್ಸೂಚಿ ಭಾಷಣ ಮಾಡಿದ ಅವರು, ‘ಬಹು ಶಿಸ್ತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಉತ್ತಮ ಮಾನ್ಯತೆ ಮತ್ತು ದಾಖಲೆ ಹೊಂದಿರುವ ಸಂಸ್ಥೆಗಳಿಗೆ ಸ್ವಾಯತ್ತತೆಯೊಂದಿಗೆ ಪ್ರಶಸ್ತಿ, ಪುರಸ್ಕಾರಗಳನ್ನೂ ನೀಡಲಾಗುವುದು. ವಿದ್ಯಾರ್ಥಿಗಳ ಅನುಭವಗಳನ್ನು ವರ್ಧಿಸಲು ಪಠ್ಯಕ್ರಮ, ಮೌಲ್ಯಮಾಪನ ಮತ್ತು ವಿದ್ಯಾರ್ಥಿ ಸಹಕಾರವನ್ನು ಪುನರುಜ್ಜೀವನಗೊಳಿಸಲಾಗುವುದು. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಗುಣಮಟ್ಟದ ಸಂಶೋಧನೆಗೆ ಧನಸಹಾಯ ನೀಡಲು ರಾಷ್ಟ್ರೀಯ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗುವುದು’ ಎಂದು ಪ್ರಕಟಿಸಿದರು.

‘ಹೊಸ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದು ಕಾರ್ಯಗತಗೊಳಿಸುವಲ್ಲಿ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕೆಂಬುದು ನಮ್ಮ ಹಿರಿದಾದ ನಿರೀಕ್ಷೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಎಲ್ಲರ ಪಾಲುದಾರಿಕೆಯೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು, ಅವುಗಳಿಗೆ ಶಕ್ತಿ ತುಂಬಲು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸಹಕಾರ ನೀಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ಕಟ್ಟುವ ಕ್ರೋಡೀಕರಿಸುವ ಅಗತ್ಯವಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕೇಂದ್ರೀಯ ವಿ.ವಿ. ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಅವರು ಹಿರಿಯ ಸಾಹಿತಿ ಮ.ಗು.ಬಿರಾದಾರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಡಾಕ್ಟರೇಟ್ ಪದವಿ ಪಡೆಯಬೇಕಿದ್ದ ಹಿರಿಯ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ, ಹಿರಿಯ ಕವಿ ಚೆನ್ನವೀರ ಕಣವಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹಾಗೂ ಇಸ್ರೊ ಅಧ್ಯಕ್ಷ ಕೆ. ಶಿವನ್ ಅವರು ಕೊರೊನಾ ಪ್ರಯುಕ್ತ ಘಟಿಕೋತ್ಸವಕ್ಕೆ ಬಂದಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ವಿವಿಧ ನಿಕಾಯಗಳ ಡೀನ್‌ಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿ.ವಿ. ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ ಅವರು ಆನ್‌ಲೈನ್ ಮೂಲಕ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ರಾಜ್ಯಗಳಲ್ಲಿರುವ ವಿ.ವಿ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.

ವಿ.ವಿ. ಸಮ ಕುಲಪತಿ ಪ್ರೊ.ಜಿ.ಆರ್. ನಾಯಕ್, ಕುಲಸಚಿವ ಪ್ರೊ.ಮುಷ್ತಾಕ್ ಅಹ್ಮದ್ ಐ ಪಟೇಲ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಬಿ.ಆರ್.ಕೆರೂರ, ಮಾನವಿಕ ವಿಭಾಗದ ಡೀನ್ ಡಾ.ಬಸವರಾಜ ಡೋಣೂರ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವಿಕ್ರಮ ವಿಸಾಜಿ, ಪ್ರೊ.ಶಿವಗಂಗಾ ರುಮ್ಮಾ ಇತರರು ಇದ್ದರು.

ವಿ.ವಿ. ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಜಯದೇವಿ ಜಂಗಮಶೆಟ್ಟಿ ಹಾಗೂ ತಂಡದವರು ನಾಡಗೀತೆ ಹಾಗೂ ವಿಶ್ವವಿದ್ಯಾಲಯ ಗೀತೆಯನ್ನು ಸಂಯೋಜಿಸಿ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.