
ಕಲಬುರಗಿ: ‘ಮಕ್ಕಳ ಬೆಳವಣಿಗೆಗೆ ಆರಂಭಿಕ ಹಂತದ ಶಿಕ್ಷಣ ಬಹಳ ಮುಖ್ಯ’ ಎಂದು ಕರ್ನಾಟಕ ಕೇಂದ್ರೀಯ ವಿ.ವಿ. (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆಯ ಶಿಕ್ಷಣ ಮತ್ತು ತರಬೇತಿ ನಿಕಾಯ ಅಯೋಜಿಸಿದ್ದ ಕಲಿಕೆ, ಟಾಟಾ ಟ್ರಸ್ಟ್ ಜೊತೆಗಿನ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕುವ ಮತ್ತು ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಪಾಲಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಾಥಮಿಕ ಹಂತದಲ್ಲಿ ಮಕ್ಕಳ ಶಿಕ್ಷಣವು ತುಂಬಾ ಸಂಕೀರ್ಣವಾಗಿದೆ ಮತ್ತು ಅದಕ್ಕೆ ವಿಶೇಷ ಗಮನ ನೀಡಬೇಕಾಗುತ್ತದೆ. ಎನ್ಇಪಿ ಆರಂಭಿಕ ಹಂತದ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳು, ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ ಶಾಲೆಗಳು ಮಕ್ಕಳ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾಗಿವೆ. ಈ ಒಪ್ಪಂದದಡಿ ತೆಗೆದುಕೊಳ್ಳಲಾದ ಎಲ್ಲಾ ಉಪಕ್ರಮಗಳಿಗೆ ಸಿಯುಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಪರಿವರ್ತನೆಗೆ ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿಮ್ಮೊಂದಿಗೆ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.
ಕಲಿಕೆ, ಟಾಟಾ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಶಿವಕುಮಾರ್ ಡಿ. ಮಾತನಾಡಿ, ‘ಕಲಿಕೆ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಆರಂಭಿಕ ಮತ್ತು ಪ್ರಾಥಮಿಕ ಹಂತದ ಗುಣಾತ್ಮಕ ಕಲಿಕೆ. ಆರಂಭಿಕ ಮತ್ತು ಪ್ರಾಥಮಿಕ ಹಂತದಲ್ಲಿ ಕಲಿಕೆಯಲ್ಲಿ ಹಲವು ಸವಾಲುಗಳಿವೆ. ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಲಿಕೆ ಮೂಲವಿಲ್ಲ. ಈ ಹಂತದಲ್ಲಿ ಕಲಿಕಾ ಪ್ರಕ್ರಿಯೆಗೆ ಗ್ರಂಥಾಲಯಗಳು ಅತ್ಯುತ್ತಮ ಪೂರಕ ಮೂಲಗಳಲ್ಲಿ ಒಂದಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ನಾವು ನವೀನ ಪುಸ್ತಕಗಳನ್ನು ರಚಿಸಿದ್ದೇವೆ’ ಎಂದು ಅವರು ಹೇಳಿದರು.
ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ, ಕಾರ್ಯಕ್ರಮದ ಸಂಯೋಜಕ ಮಯೂರ ಪೂಜಾರ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಪಾಲಕರ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಶಿಕ್ಷಣ ನಿಕಾಯದ ಡೀನ್ ಪ್ರೊ.ಜಿ.ಆರ್. ಅಂಗಡಿ ಸ್ವಾಗತಿಸಿದರು. ಪಾರ್ವತಿ ಮತ್ತು ತಾನಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ನಿಶಾ ಪ್ರಜಾಪತಿ ವಂದಿಸಿದರು. ಟಾಟಾ ಟ್ರಸ್ಟ್‌ನ ಶಿವಕುಮಾರ ಯಾದವ್, ಗಿರೀಶ್ ಎಚ್, ಸಿಯುಕೆಯ ತಿಯಾಗೊ, ಗುರು ಬಾಗೇವಾಡಿ, ಪಿ. ಎಸ್. ಕಟ್ಟಿಮನಿ, ಅಖಿಲೇಶ್, ಬುಚಿ ರೆಡ್ಡಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಪಾಲಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.