ADVERTISEMENT

ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಹೆಚ್ಚಲಿದೆ ಉದ್ಯೋಗಾವಕಾಶ: ರಂಜಿತ್ ಮಿಶ್ರಾ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:38 IST
Last Updated 16 ಆಗಸ್ಟ್ 2025, 7:38 IST
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ ಆಯೋಜಿಸಿದ್ದ ಸೈಬರ್ ಸೆಕ್ಯುರಿಟಿ ಬೂಟ್ ಕ್ಯಾಂಪ್ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ರಂಜಿತ್ ಮಿಶ್ರಾ, ಶುಭಾಂಗಿ ಚಿಕ್ಟೆ, ಆನಂದ ಎಂ.ಆರ್. ಇತರರು ಭಾಗವಹಿಸಿದ್ದರು
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ ಆಯೋಜಿಸಿದ್ದ ಸೈಬರ್ ಸೆಕ್ಯುರಿಟಿ ಬೂಟ್ ಕ್ಯಾಂಪ್ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ರಂಜಿತ್ ಮಿಶ್ರಾ, ಶುಭಾಂಗಿ ಚಿಕ್ಟೆ, ಆನಂದ ಎಂ.ಆರ್. ಇತರರು ಭಾಗವಹಿಸಿದ್ದರು   

ಕಲಬುರಗಿ: ‘ನಿತ್ಯ ಬೆಳಗಾದರೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜನಸಾಮಾನ್ಯರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ನಿಮ್ಮಿಂದ ಆಗಬೇಕಿದೆ. ವಿದ್ಯಾರ್ಥಿಗಳು ಕೇವಲ ಸರ್ಟಿಫಿಕೇಟ್‌ ಗಳಿಸಲು ಪದವಿ ಮಾಡಬಾರದು. ಬದಲಾಗಿ ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧ್ಯಯನ ನಿರತರಾಗಬೇಕು. ಜೊತೆಗೆ ಬರುವ ದಿನಮಾನಗಳಲ್ಲಿ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಆದ್ದರಿಂದ ನೀವು ಸದಾ ನೂತನ ಕಲಿಕೆಗೆ ಒಗ್ಗಿಕೊಳ್ಳಬೇಕು’ ಎಂದು ಸೈಸೆಕ್ ಮುಖ್ಯಸ್ಥ ರಂಜಿತ್ ಮಿಶ್ರಾ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಸೈಸೆಕ್ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಸೈಬರ್ ಸೆಕ್ಯುರಿಟಿ ಎರಡು ದಿನಗಳ ಬೂಟ್ ಕ್ಯಾಂಪ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಈಗಾಗಲೇ ಈ ರೀತಿಯ ಕಾರ್ಯಕ್ರಮಗಳ ಅನುಭವ ಹೊಂದಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಅರಸಿ ಹೋಗಿ ನಾವು ಅವರಲ್ಲಿನ ಪ್ರತಿಭೆ ಅನಾವರಣಗೊಳಿಸುವ ಪ್ರಯತ್ನ ನಾವು ಮಾಡುತ್ತಿದ್ದೇವೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಶುಭಾಂಗಿ ಡಿ. ಚಿಕ್ಟೆ ಮಾತನಾಡಿ, ‘ನಮ್ಮ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕಂಗೊಳಿಸಬೇಕಾದರೆ ಸತತ ಅಧ್ಯಯನಶೀಲರಾಗಬೇಕು’ ಎಂದು ಹೇಳಿದರು.

ADVERTISEMENT

ಎರಡು ದಿನಗಳ ಬೂಟ್ ಕ್ಯಾಂಪಿನಲ್ಲಿ ಒಂಬತ್ತು ಎಂಜಿನಿಯರಿಂಗ್‌ ಕಾಲೇಜುಗಳಿಂದ ಸುಮಾರು 283 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಕ್ಯಾಂಪಿನಲ್ಲಿ ಆಯೋಜಿಸಿದ್ದ ‘ಕ್ಯಾಚ್ ದ್ ಫ್ಲ್ಯಾಗ್’ ಸಂಸ್ಥೆಯಲ್ಲಿ ಜಯಶಾಲಿಯಾದ ಮೊದಲ ಹದಿನೈದು ಜನ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಸೈಸೆಕ್ ಸಂಸ್ಥೆ ವತಿಯಿಂದ ಐವತ್ತು ವಿದ್ಯಾರ್ಥಿಗಳಿಗೆ ಉಚಿತ ‘ಫಿನಿಶಿಂಗ್ ಸ್ಕೂಲ್’ ಎಂಬ ಎಂಟು ವಾರಗಳ ಸೈಬರ್ ಸೆಕ್ಯುರಿಟಿ ತರಬೇತಿ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸೈಸೆಕ್ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಆನಂದ ಎಂ.ಆರ್, ವ್ಯವಸ್ಥಾಪಕಿ ಶಿಲ್ಪಾ ಹರಿರಾಜ್, ಶಿವಲಿಂಗ ಸಾಲಕ್ಕಿ, ವಿವೇಕ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಮಹಮ್ಮದ್ ಅಬ್ದುಲ್ ವಾಹೀದ್, ಗಿರೀಶ್ ಬಡಿಗೇರ, ಪ್ರೊ. ಆದರ್ಶ ಗಡಾಳೆ, ವಿಕ್ರಮ ಪಾಟೀಲ, ಸಮೃದ್ಧ, ಓಂಕಾರ ಉಪಸ್ಥಿತರಿದ್ದರು. ಬ್ರಿಜ್ ಭೂಷಣ ವಂದಿಸಿದರು. ಪ್ರೊ.ಖಲೀದಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.