ADVERTISEMENT

ಉದ್ಯಮಿಗಳ ಬದಲು ದಲಿತರಿಗೆ ಸರ್ಕಾರ ಭೂಮಿ ಹಂಚಲಿ: ಬಸವರಾಜ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 3:26 IST
Last Updated 19 ಆಗಸ್ಟ್ 2024, 3:26 IST
ದಲಿತ ಹಕ್ಕುಗಳ ಸಮಿತಿಯು ಕಲಬುರಗಿಯಲ್ಲಿ ಆಯೋಜಿಸಿದ್ದ ದಲಿತರ ವಿಮೋಚನೆಯ ದಾರಿ ಕುರಿತ ಜಿಲ್ಲಾ ಮಟ್ಟದ ತರಬೇತಿ ಶಿಬಿರದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿದರು. ಪಾಂಡುರಂಗ ಮಾವಿನಕರ್, ಸುಧಾಮ ಧನ್ನಿ, ರಾಜಣ್ಣ, ಚಂದಮ್ಮ ಗೋಳಾ ಭಾಗವಹಿಸಿದ್ದರು
ದಲಿತ ಹಕ್ಕುಗಳ ಸಮಿತಿಯು ಕಲಬುರಗಿಯಲ್ಲಿ ಆಯೋಜಿಸಿದ್ದ ದಲಿತರ ವಿಮೋಚನೆಯ ದಾರಿ ಕುರಿತ ಜಿಲ್ಲಾ ಮಟ್ಟದ ತರಬೇತಿ ಶಿಬಿರದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿದರು. ಪಾಂಡುರಂಗ ಮಾವಿನಕರ್, ಸುಧಾಮ ಧನ್ನಿ, ರಾಜಣ್ಣ, ಚಂದಮ್ಮ ಗೋಳಾ ಭಾಗವಹಿಸಿದ್ದರು   

ಕಲಬುರಗಿ: ರಾಜ್ಯ ಸರ್ಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ಬಹುತೇಕ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಭೂಮಿ ಹಂಚಿಕೆ ಮಾಡುತ್ತಿದೆ. ಆದರೆ, ಅಲ್ಲಿ ದಶಕಗಳು ಕಳೆದರೂ ಕೈಗಾರಿಕೆಗಳು ಬಂದಿಲ್ಲ. ಅದರ ಬದಲಾಗಿ ದಲಿತರಿಗೂ ಭೂಮಿ ಹಂಚಿಕೆ ಮಾಡಿದರೆ ಅಷ್ಟು ಕುಟುಂಬಗಳು ಬದುಕು ಕಂಡುಕೊಳ್ಳುತ್ತವೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದರು.

ದಲಿತ ಹಕ್ಕುಗಳ ಸಮಿತಿಯು ನಗರದ ಸಿಪಿಎಂ ಕಚೇರಿ ಹಸನ್‌ಖಾನ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಲಿತರ ವಿಮೋಚನೆಯ ದಾರಿ ಕುರಿತ ಜಿಲ್ಲಾ ಮಟ್ಟದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸರ್ಕಾರದ ಬಳಿ ಬೀಳು, ಗೈರಾಣ ಭೂಮಿ, ಅರಣ್ಯ ಭೂಮಿ ಸೇರಿದಂತೆ 40 ಲಕ್ಷ ಎಕರೆ ಭೂಮಿ ಇದ್ದು, ಅದನ್ನು ದಲಿತರಿಗೆ ಹಂಚಿಕೆ ಮಾಡಬೇಕು. ಉದ್ಯಮಿಗಳಿಗೆ ವರ್ಷಕ್ಕೆ ಒಂದು ಎಕರೆಗೆ ₹ 100 ದರದಲ್ಲಿ ಸರ್ಕಾರ ಭೂಮಿಯನ್ನು ನೀಡಿದೆ. ಅದೇ ಹಣವನ್ನು ದಲಿತರು ನೀಡಲು ಸಿದ್ಧರಿದ್ದಾರೆ. ಹಾಗಾಗಿ, ಈ ಬಗ್ಗೆ ನಿಯಮ ರೂಪಿಸಿ ಭೂಮಿ ಹಂಚಿಕೆ ಮಾಡಬೇಕು‘ ಎಂದು ಒತ್ತಾಯಿಸಿದರು.

ADVERTISEMENT

‘ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆಯಡಿ ಪ್ರತಿ ವರ್ಷ ₹ 36 ಸಾವಿರ ಕೋಟಿ ಮೀಸಲಿಡಬೇಕು ಎಂದು ನಿಯಮ ಹೇಳುತ್ತದೆ. ಆದರೆ, ಆ ಹಣದ ಒಂದು ರೂಪಾಯಿಯಾದರೂ ನಿಮಗೆ ಸಿಕ್ಕಿದೆಯೇ’ ಎಂದು ಸಭೆಯಲ್ಲಿದ್ದ ಮಹಿಳೆಯರನ್ನು ಪ್ರಶ್ನಿಸಿದರು. ಇದಕ್ಕೆ, ಮಹಿಳೆಯರು ಸಿಕ್ಕಿಲ್ಲ ಎಂದರು.

‘ಪರಿಶಿಷ್ಟ ಜಾತಿ, ಪಂಗಡ ಉಪಯೋಜನೆಯಡಿ ಕೋಟ್ಯಂತರ ಹಣವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಅದೇ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ನೀಡಿದರೆ ಬದುಕು ರೂಪಿಸಿಕೊಳ್ಳುತ್ತಾರೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಹಂಚಿದರೆ ಒಬ್ಬರಿಗೆ ₹ 1.60 ಲಕ್ಷ ಸಿಗಲಿದೆ ಎಂದು ಹೇಳಿದರು.

ದಲಿತ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಜಿಲ್ಲಾ ಅಧ್ಯಕ್ಷ ಸುಧಾಮ ಧನ್ನಿ, ಕಾರ್ಯದರ್ಶಿ ಪಾಂಡುರಂಗ ಮಾವಿನಕರ್, ಚಂದಮ್ಮ ಗೋಳಾ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.