ADVERTISEMENT

ಬೆಳೆ ಹಾನಿ | ಎಕರೆಗೆ ₹17 ಸಾವಿರ ಪರಿಹಾರ ನೀಡಿ: ಚಂದು ಜಾಧವ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:12 IST
Last Updated 9 ಅಕ್ಟೋಬರ್ 2025, 5:12 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು   

ಕಲಬುರಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾಗೂ ನೆರೆ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಂದು ಜಾಧವ, ‘ಕಲ್ಯಾಣ ಕರ್ನಾಟಕದಲ್ಲಿ ಅತಿವೃಷ್ಟಿ ಪ್ರವಾಹದಿಂದ ಶೇ 90ರಷ್ಟು ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರ ಕೂಡಲೇ ಜಿಲ್ಲೆಯನ್ನು ಹಸಿ ಬರ ಪೀಡಿತ ಎಂದು ಘೋಷಿಸಬೇಕು. ಪ್ರತಿ ಎಕರೆಗೆ ಕನಿಷ್ಠ ₹17 ಸಾವಿರ ಪರಿಹಾರ ವಿತರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಘದ ಗೌರವ ಸಲಹೆಗಾರ ಶೌಕತಅಲಿ ಆಲೂರ ಮಾತನಾಡಿ, ‘ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಎನ್‌ಡಿಆರ್‌ಎಫ್‌ ನಿಯಮಗಳನ್ನು ಸಡಿಲಗೊಳಿಸಬೇಕು. ರೈತರ ಬದುಕೇ ನೀರಲ್ಲಿ ನಿಂತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರದ ನಾಯಕರು ಅತಿವೃಷ್ಟಿ ಹಾನಿ ಅಧ್ಯಯನ ನೆಪದಲ್ಲಿ ಸಮೀಕ್ಷೆಗೆ ಸೀಮಿತವಾಗಬಾರದು. ಪಟ್ಟು ಹಿಡಿದು ಕೇಂದ್ರ ಸರ್ಕಾರದಿಂದ ರೈತರಿಗೆ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ ರೈತರ ಮೇಲಿನ ನಿಮ್ಮ ಪ್ರೀತಿಯು ಬೋಗಸ್‌ ಎಂದು ಸಾಬೀತಾಗುತ್ತದೆ’ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸುನೀಲ ಮಾನಪಡೆ, ಶಾಂತಪ್ಪ ಪಾಟೀಲ, ನಂದಕುಮಾರ ಮಾಲಿಪಾಟೀಲ, ಹಣಮಂತ ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.