ADVERTISEMENT

ಕಲಬುರಗಿ: ಯುವಜನರಿಗಾಗಿ ‘ದಾಸ ನಮನ’ ಗಾಯನ ಸ್ಪರ್ಧೆ

ತಿರುಪತಿ ತಿರುಮಲ ದೇವಸ್ಥಾನಗಳು ಹಾಗೂ ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್‌–3 ವತಿಯಿಂದ ರಾಷ್ಟ್ರಮಟ್ಟದವರೆಗೂ ಸ್ಪರ್ಧೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 10:09 IST
Last Updated 3 ಡಿಸೆಂಬರ್ 2021, 10:09 IST
ಆನಂದತೀರ್ಥಾಚಾರ್ಯ ಪಗಡಾಲ
ಆನಂದತೀರ್ಥಾಚಾರ್ಯ ಪಗಡಾಲ   

ಕಲಬುರಗಿ: ‘ಯುವ ಸಮುದಾಯದಲ್ಲಿ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ತಿರುಪತಿ ತಿರುಮಲ ದೇವಸ್ಥಾನಗಳು ಹಾಗೂ ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್‌–3 (SVBC-3) ವತಿಯಿಂದ ದೇಶದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ‘ದಾಸ ನಮನ’ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ಪಗಡಾಲ ತಿಳಿಸಿದರು.

‘ಕಲಬುರಗಿ ಜಿಲ್ಲೆಯಲ್ಲೂ ಈ ಸ್ಪರ್ಧೆ ಆಯೋಜಿಸಲಾಗಿದೆ. 15ರಿಂದ 25 ವರ್ಷದೊಳಗಿನ ಯುವಕ/ ಯುವತಿಯರು ಪಾಲ್ಗೊಳ್ಳಬಹುದು. ಜಾತಿ, ಧರ್ಮ, ಪ್ರದೇಶದ ಭೇದವಿಲ್ಲದೇ ಯಾರು ಬೇಕಾದರೂ ‍ಭಾಗಿಯಾಗಲು ಅವಕಾಶವಿದೆ‘ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‌

‘ಜಿಲ್ಲಾಮಟ್ಟದಲ್ಲಿ 10 ಉತ್ತಮ ಗಾಯಕರನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ಅದರಲ್ಲೂ ಆಯ್ಕೆಯಾದವರ ಒಂದು ತಂಡ ರಚಿಸಿ ಕೊನೆಯದಾಗಿ ರಾಷ್ಟ್ರಮಟ್ಟದ ದಾಸ ನಮನ ಕಾರ್ಯಕ್ರಮ ನಡೆಸಲಾಗುವುದು. ಪ್ರತಿ ಹಂತದಲ್ಲೂ ವಿಜೇತರಿಗೆ ಪ್ರಶಸ್ತಿ ಪತ್ರ, ಪಾರಿತೋಷಕ ನೀಡಲಾಗುವುದು. ಗೆದ್ದ ಗಾಯಕರ ಹಾಡುಗಳನ್ನು ಎಸ್‌ವಿಬಿಸಿ–3 ಕನ್ನಡ ಚಾನಲ್‌ನಲ್ಲಿ ಪ್ರಸಾರ ಕೂಡ ಮಾಡಲಾಗುವುದು’ ಎಂದರು.

ADVERTISEMENT

‘ಸ್ಪರ್ಧೆಯಲ್ಲಿ ದಾಸರ ಕೀರ್ತನೆಗಳನ್ನು ಮಾತ್ರ ಹಾಡಲು ಅವಕಾಶವಿದೆ. ಶ್ರೀಪಾದರಾಜರು, ವಾದಿರಾಜರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಪ್ರಾಣೇಶದಾಸರು, ವ್ಯಾಸರಾಜರು, ಪುರಂದರದಾಸರು, ಪ್ರಸನ್ನ ವೆಂಕಟದಾಸರು, ವ್ಯಾಸ ವಿಠಲದಾಸರು, ಜಗನ್ನಾಥ ದಾಸರ ಕೀರ್ತನೆಗಳನ್ನು ಹಾಡಬಹುದು. ಸಂಗೀತ ಕ್ಷೇತ್ರದ ಪ್ರಮಾಣಪತ್ರ ಇದ್ದವರಿಗೆ ಆದ್ಯತೆ ನೀಡಲಾಗುವುದು. ಆದರೆ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾವುದೇ ಸಂಗೀತ ತರಬೇತಿ ಪಡೆದಿರಬೇಕೆಂಬ ನಿಯಮ ಇಲ್ಲ. ಶ್ರುತಿ, ರಾಗ, ತಾಳ, ಶಬ್ದಸ್ಪಷ್ಟತೆ ಹಾಗೂ ಸಾಹಿತ್ಯ ಹೀಗೆ ಎಲ್ಲ ಆಯಾಮಗಳನ್ನೂ ಗಾಯಕರನ್ನು ಜಡ್ಜ್‌ ಮಾಡಲಾಗುತ್ತದೆ’ ಎಂದೂ ಅವರು ಮಾಹಿತಿ ನೀಡಿದರು.

www.svbcttd.com ಈ ಮೇಲ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ವಯಸ್ಸಿನ ಪ್ರಮಾಣಪತ್ರ ಕಡ್ಡಾಯ. ಡಿಸೆಂಬರ್‌ 25 ಅರ್ಜಿ ಸಲ್ಲಿಸಲು ಕೊನೆಯ ದಿನ. ಅರ್ಜಿಗಳು ನಂದ ನಂತರ ಎಲ್ಲ ಸ್ಪರ್ಧಾಳುಗಳಿಗೆ ಸ್ಪರ್ಧೆಯ ದಿನಾಂಕ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಸಂಚಾಲಕರಾದ ಡಾ.ಶ್ರೀನಿವಾಸಾಚಾರ್ಯ ಪದಕಿ 9448572259 ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.