ADVERTISEMENT

ಶ್ರಮವಿಲ್ಲದ ಸಂಪತ್ತು ಬಹುಕಾಲ ಉಳಿಯದು

ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ಕಡಗಂಚಿಯ ವೀರಭದ್ರ ಶಿವಾಚಾರ್ಯರ ಹಿತನುಡಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 17:07 IST
Last Updated 24 ಅಕ್ಟೋಬರ್ 2020, 17:07 IST
ಕಲಬುರ್ಗಿಯಲ್ಲಿ ಶನಿವಾರ ನಡೆದ ದಸರಾ ದರ್ಬಾರ್‌ ಕಾರ್ಯಕ್ರಮದಲ್ಲಿ ಕಡಗಂಚಿಯ ವೀರಭದ್ರ ಶಿವಾಚಾರ್ಯರು ಪ್ರವಚನ ನೀಡಿದರು
ಕಲಬುರ್ಗಿಯಲ್ಲಿ ಶನಿವಾರ ನಡೆದ ದಸರಾ ದರ್ಬಾರ್‌ ಕಾರ್ಯಕ್ರಮದಲ್ಲಿ ಕಡಗಂಚಿಯ ವೀರಭದ್ರ ಶಿವಾಚಾರ್ಯರು ಪ್ರವಚನ ನೀಡಿದರು   

ಕಲಬುರ್ಗಿ: ‘ಶ್ರಮದಿಂದ ಗಳಿಸಿದ ಸಂಪತ್ತ ಶಾಂತಿ, ನೆಮ್ಮದಿ ನೀಡುತ್ತದೆ. ಶ್ರಮವಿಲ್ಲದೆ ಬಂದ ಸಂಪತ್ತು ಬಹಳಕಾಲ ಉಳಿಯಲಾರದು’ ಎಂದು ಕಡಗಂಚಿಯ ವೀರಭದ್ರ ಶಿವಾಚಾರ್ಯರು ನುಡಿದರು.

ನಗರದ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ದಸರಾ ದರ್ಬಾರ್‌ ಹಾಗೂ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಕಲ್ಲು ಹೃದಯ ಇರುವವರನ್ನು ಬದಲಿಸಬಹುದು. ಆದರೆ, ಕೊಳಕು ಮನಸ್ಸು ಇರುವವರುನ್ನು ಬದಲಿಸಲು ಸಾಧ್ಯವಿಲ್ಲ’ ಎಂದರು.

‘ಜೀವನದಲ್ಲಿ ಹಾಲು ಎಲ್ಲರಿಗೂ ಬೇಕು. ಆದರೆ, ಹಸು ಸಾಕಲು ಯಾರು ತಯಾರಿಲ್ಲ. ನೀರು ಎಲ್ಲರಿಗೂ ಬೇಕು ಆದರೆ ನೀರು ಉಳಿಸಲು ಯಾರೂ ತಯಾರಿಲ್ಲ. ಊಟ ಎಲ್ಲರಿಗೂ ಬೇಕು ವ್ಯವಸಾಯ ಮಾಡಲು ಯಾರೂ ತಯಾರಿಲ್ಲ. ನೆರಳು ಎಲ್ಲರಿಗೂ ಬೇಕ ಗಿಡ– ಮರ ಬೆಳೆಸಲು ತಯ್ಯಾರಿಲ್ಲ. ಧರ್ಮದ ಫಲ ಎಲ್ಲರಿಗೂ ಬೇಕು ಆ ಧರ್ಮದ ಪರಿಪಾಲನೆ ಮಾಡಲು ಹಿಂಜರಿಯುತ್ತಾರೆ’ ಎಂದರು.

ADVERTISEMENT

‘ವೀರಶೈವ ಧರ್ಮದಲ್ಲಿ ಅಮೂಲ್ಯವಾದ ಚಿಂತನೆಗಳಿವೆ ಅವುಗಳನ್ನು ಆಚರಿಸಬೇಕು. ನಮ್ಮ ಹುಟ್ಟುಹಬ್ಬ ತಾವೆಲ್ಲರೂ ಆಚರಿಸುತ್ತಿರುವುದನ್ನು ನೋಡಿದರೆ ನಮ್ಮ ನರ–ನಾಡಿಯಲ್ಲಿ ಶಕ್ತಿ ಇರುವವರೆಗೆ ನಾವೂ ಧರ್ಮದ ಸೇವೆ ಮಾಡುತ್ತೇವೆ’ ಎಂದು ನುಡಿದರು.

ಆಳಂದದ ಸಿದ್ಧಲಿಂಗ ಶಿವಾಚಾರ್ಯರು, ಕಾಳಗಿಯ ಚಂದ್ರಮೌಳಿ ಸ್ವಾಮೀಜಿ, ಕಿಣ್ಣಿ ಸುಲ್ತಾನ ಶಿವಮಹಾಂತ ಶಿವಾಚಾರ್ಯರು, ಕಡಗಂಚಿ, ಸುಲೇಪೇಠ ಪಂಪಾಪತಿ ದೇವರು, ರಾಚಯ್ಯ ಹತ್ತರಗಿ, ಶಿವಕವಿ ಜೋಗೂರ ಮಾತನಾಡಿದರು.

ಮಾತೋಶ್ರೀ ಕಾವೇರಮ್ಮ, ಸೈಬಣ್ಣ ನೀಲೂರ, ಸಿದ್ರಾಮಪ್ಪ ಆಲಗೂಡಕರ, ಮಲಕಾಜಪ್ಪ ಮುಗಳಿ, ವಿಶ್ವಾರಾಧ್ಯ, ಶಿವರಾಯ ಮೂಲಗೆ, ಶಿವಾನಂದ ಮಠಪತಿ, ಮಲ್ಲಣ್ಣ ಕಣ್ಣಿ, ಗುರುಲಿಂಗಪ್ಪ ಡೋಣಿ, ಸಿದ್ಧಾಂತ ಶಿಖಾಮಣಿಯ ಪ್ರವಚನದ ವೇದಿಕೆಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ಅಮೃತಪ್ಪ ಮಲ್ಕಪ್ಪಗೌಡ ಸ್ವಾಗತಿಸಿದರು. ಪುರಾಣಿಕರಾದ ಸಿದ್ಧೇಶ್ವರ ಶಾಸ್ತ್ರಿ, ಮೌನೇಶ ಪಂಚಾಳ ಸಂಗೀತ ಕಾರ್ಯಕ್ರಮ ನೀಡಿದರು. ಡಾ.ಶಿವಶರಣಪ್ಪ ಸರಸಂಬಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.