ADVERTISEMENT

ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ಕೊಡಿ: ಯಶವಂತ ವಿ. ಗುರುಕರ್

ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಂದ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 10 ಮೇ 2022, 16:27 IST
Last Updated 10 ಮೇ 2022, 16:27 IST
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಸಿದ್ದೇಶ್ವರಪ್ಪ ಜಿ.ಬಿ, ಶಿವಾನಂದ ತಗಡೂರು, ಜಿಲ್ಲಾಧಿಕಾರಿ ಯಶವಂತ ಗುರುಕರ್, ಭವಾನಿಸಿಂಗ್ ಠಾಕೂರ್, ದೇವೇಂದ್ರಪ್ಪ ಕಪನೂರ, ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್, ಬಾಬುರಾವ ಯಡ್ರಾಮಿ ಹಾಗೂ ಪದಾಧಿಕಾರಿಗಳು ಇದ್ದರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಸಿದ್ದೇಶ್ವರಪ್ಪ ಜಿ.ಬಿ, ಶಿವಾನಂದ ತಗಡೂರು, ಜಿಲ್ಲಾಧಿಕಾರಿ ಯಶವಂತ ಗುರುಕರ್, ಭವಾನಿಸಿಂಗ್ ಠಾಕೂರ್, ದೇವೇಂದ್ರಪ್ಪ ಕಪನೂರ, ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್, ಬಾಬುರಾವ ಯಡ್ರಾಮಿ ಹಾಗೂ ಪದಾಧಿಕಾರಿಗಳು ಇದ್ದರು   

ಕಲಬುರಗಿ: ‘ಪತ್ರಕರ್ತರು ನಕಾರಾತ್ಮಕ ಸಂಗತಿಗಳನ್ನು ವೈಭವೀಕರಿಸುವ ಬದಲು ಜನರಿಗೆ ಪ್ರಯೋಜನವಾಗುವ, ಸ್ಪೂರ್ತಿಗೊಳಿಸುವ ಸಕಾರಾತ್ಮಕ ಸಂಗತಿಗಳನ್ನು ಪ್ರಕಟಿಸುವತ್ತ ಹೆಚ್ಚು ಗಮನ ಹರಿಸಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಸ್ರೇಲ್‌ ದೇಶದಲ್ಲಿ ನಿತ್ಯವೂ ಬಾಂಬ್‌ ಸ್ಫೋಟವಾಗುತ್ತಲೇ ಇರುತ್ತದೆ. ಆದರೆ, ಆ ಸುದ್ದಿಯನ್ನು ಪ್ರಧಾನವಾಗಿ ಪ್ರಕಟಿಸುವ ಬದಲು ರೈತರ ಯಶೋಗಾಥೆಗಳಂತಹ ಸಕಾರಾತ್ಮಕ ಸುದ್ದಿಗಳನ್ನು ಪ್ರಕಟಿಸುತ್ತಾರೆ. ಅಂತಹ ಸುದ್ದಿಗಳು ಇಲ್ಲಿಯೂ ಪ್ರಕಟವಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪತ್ರಕರ್ತರ ಸಂಘ ಹಾಗೂ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ನೆರವು ನೀಡಲು ಜಿಲ್ಲಾಡಳಿತ ಸಿದ್ಧವಾಗಿದೆ. ಸಂಘದ ಸದಸ್ಯರು ಬಯಸಿದರೆ ಈಜುಕೊಳ ಬಳಕೆ ಪಾಸ್ ನೀಡಲು ಸಿದ್ಧ’ ಎಂದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ‘ಚುನಾವಣೆ ನಡೆಯುವವರೆಗೂ ಎರಡು ಗುಂಪುಗಳು ಇರುವುದು ಸಹಜ. ಆ ನಂತರ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪತ್ರಕರ್ತರ ಭವನವನ್ನು ವಾರ್ತಾ ಇಲಾಖೆ ಕೆಲ ಕಾಲ ತನ್ನ ಸುಪರ್ದಿಗೆ ಪಡೆದರೂ ಅಲ್ಲಿನ ಫಲಕವನ್ನು ತೆರವುಗೊಳಿಸಬಾರದಿತ್ತು’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ‘ಪತ್ರಿಕಾ ಭವನದಲ್ಲಿ ಕೆಲವೇ ದಿನಗಳಲ್ಲಿ ಗ್ರಂಥಾಲಯ ಆರಂಭಗೊಳ್ಳಲಿದ್ದು, ಪತ್ರಕರ್ತರ ದೈಹಿಕ ಚಟುವಟಿಕೆಗಾಗಿ ಕ್ರೀಡಾ ಪರಿಕರ ಇರಿಸಲಾಗುವುದು’ ಎಂದರು.

ಕಲಬುರಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್, ಮಾಧ್ಯಮ ಅಕಾಡೆಮಿ ಸದಸ್ಯ ದೇವಿಂದ್ರಪ್ಪ ಕಪನೂರ, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಖಜಾಂಚಿ ಅಶೋಕ ಕಪನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.