ADVERTISEMENT

ಯುವಜನರಿಗೆ ರಚನಾತ್ಮಕ ಚಟುವಟಿಕೆ ನೀಡಿ

ನೆಹರೂ ಯುವ ಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:50 IST
Last Updated 7 ಫೆಬ್ರುವರಿ 2021, 1:50 IST
ಕಲಬುರ್ಗಿಯಲ್ಲಿ ಶನಿವಾರ ನಡೆದ ನೆಹರೂ ಯುವ ಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿವಿ.ವಿ. ಜೋತ್ಸ್ನಾ ಅವರು ಮಾತನಾಡಿದರು
ಕಲಬುರ್ಗಿಯಲ್ಲಿ ಶನಿವಾರ ನಡೆದ ನೆಹರೂ ಯುವ ಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿವಿ.ವಿ. ಜೋತ್ಸ್ನಾ ಅವರು ಮಾತನಾಡಿದರು   

ಕಲಬುರ್ಗಿ: ‘ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಸಂಪೂರ್ಣವಾಗಿ ಶಾಲಾ– ಕಾಲೇಜುಗಳು ತೆರೆಯದ ಕಾರಣ ಯುವ ಸಮುದಾಯ ಶೈಕ್ಷಣಿಕ ಚಟುವಟಿಕೆಯಿಂದ ವಿಮುಖರಾಗಿದೆ. ಅವರನ್ನು ರಚನಾತ್ಮಕ ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸ ಆರಂಭಿಸಬೇಕಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅಭಿಪ್ರಾಯಪಟ್ಟರು.

ನಗರದ್ಲಿ ಶನಿವಾರ ನೆಹರೂ ಯುವ ಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಯುವ ಸಮೂಹದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಸ್ಥಾಪಿಸಲಾಗಿರುವ ಯುವ ಕ್ಲಬ್‍ಗಳು ಮತ್ತಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಯುವ ಸಮುದಾಯದವರ ಪ್ರತಿಭೆ ಅನಾವರಣಕ್ಕೆ ಸೂಕ್ತ ಅವಕಾಶ ಕಲ್ಪಿಸುವುದಲ್ಲದೆ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ಲಬ್‍ಗಳು ಕಾಯೋನ್ಮುಖವಾಗಬೇಕು’ ಎಂದರು.

‘ರಾಜ್ಯ ಸರ್ಕಾರವು ಹತ್ತು ಹಲವು ಯೋಜನೆಗಳನ್ನು ಯುವ ಸಮೂಹದ ಕಲ್ಯಾಣಕ್ಕಾಗಿ ಜಾರಿಗೊಳಿಸಿದೆ. ನೆಹರು ಯುವ ಕೇಂದ್ರವು ಈ ಯೋಜನೆಗಳ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಆನ್‍ಲೈನ್, ವೆಬಿನಾರ್ ಮೂಲಕ ಇಲಾಖೆಯ ಯೋಜನೆಗಳು ಬಗ್ಗೆ ಅರಿವು ಮೂಡಿಸಬೇಕು. ವಿವಿಧ ವಿಷಯಗಳ ತಜ್ಞರೊಂದಿಗೆ ಸಂವಾದ ಆಯೋಜಿಸಬೇಕು. ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯ್ಯಾರಿ ಮತ್ತು ಸಾಮಾಜಿಕ ಸಮಸ್ಯೆ ಬಗೆಹರಿಸುವಂತಹ ಗುಣಗಳ ಬಗ್ಗೆ ಯುವ ಸಮುದಾಯಕ್ಕೆ ತಿಳಿ ಹೇಳಬೇಕು’ ಎಂದರು.

ADVERTISEMENT

ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಹರ್ಷಲ್ ಎಸ್. ತಳಾಸ್ಕರ್ ಮಾತನಾಡಿ, ‘ಜಿಲ್ಲೆಯಲ್ಲಿ ವಿಶೇಷವಾಗಿ ಮುಖ್ಯ ವಾಹಿನಿಯಿಂದ ದೂರ ಉಳಿದಿರುವ ಯುವ ಸಮೂಹವನ್ನೇ ಗುರಿಯನ್ನಾಗಿಸಿ ಅವರನ್ನು ಉತ್ತಮ ಪ್ರಜೆಯನ್ನಾಗಿಸಲು ಮತ್ತು ಅವರಿಗೆ ಮೂಲ ಶಿಕ್ಷಣ ನೀಡುವುದರ ಜೊತೆಗೆ ಯುವ ಕ್ಲಬ್ ಮೂಲಕ ಕೌಶಲ, ವ್ಯಕ್ತಿತ್ವ ವಿಕಸನ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 15-29 ವಯಸ್ಸಿನ ಯುವ ಸಮೂಹವೇ ಇದರ ಕೇಂದ್ರಿತವಾಗಿದ್ದಾರೆ’ ಎಂದರು.

ಪ್ರಸಕ್ತ ವರ್ಷದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ ಪಿ. ಸೂರ್ಯವಂಶಿ, ಜಿಲ್ಲಾ ಆಸ್ಪತ್ರೆಯ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ.ಅಂಬಾರಾಯ ಎಸ್. ರುದ್ರವಾಡಿ, ಜಿ.ಪಂ ಸಹಾಯಕ ಯೋಜನಾಧಿಕಾರಿ ರಮೇಶ ಸುಲ್ಫಿ, ಡಿ.ಐ.ಸಿ. ಕೇಂದ್ರದ ಸಹಾಯಕ ನಿರ್ದೇಶಕ ಅಬ್ದುಲ್ ಅಜೀಮ್, ಲೀಡ್ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಇಂತೆಸಾರ್ ಹುಸೇನ್, ಎಸ್.ಬಿ. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಪ್ರೊ.ದಯಾನಂದ ಎಸ್. ಹೊಡಲ್, ಸ್ಕೌಟ್‌ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಚನ್ನವೀರಯ್ಯ ಜಿ. ಮಠ, ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ಅರುಣಕುಮಾರ ಡಿ. ಲೋಯಾ, ಎಂ.ಎಸ್.ಡಿ.ಇ.ಯ ಮಹಾತ್ಮ ಗಾಂಧಿ ರಾಷ್ಟ್ರೀಯ ಫೆಲೋಶಿಪ್ ಪಡೆದ ಮೇಘನಾ ಎಸ್.ಕುಮಾರ, ಇತರ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.