ADVERTISEMENT

ಕಲಬುರಗಿ: ಮತಗಟ್ಟೆ ಮೂಲಸೌಕರ್ಯ ಖಚಿತಪಡಿಸಿಕೊಳ್ಳಿ; ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 4:33 IST
Last Updated 15 ಮಾರ್ಚ್ 2023, 4:33 IST
ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ಕಲಬುರಗಿ: ಮುಂಬರುವ ಸಾರ್ವತ್ರಿಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಇರುವಂತೆ ವಲಯ(ಸೆಕ್ಟರ್‌) ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು‌ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ವಲಯ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.

ಪ್ರತಿ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಶೇ 100ರಷ್ಟು ಅಂಗವಿಕಲರು ಮತದಾನ ಮಾಡುವಂತೆ ಆಗಲು ಕಡ್ಡಾಯವಾಗಿ ರ್‍ಯಾಂಪ್ ನಿರ್ಮಾಣ ಮಾಡಬೇಕು. ಮತಗಟ್ಟೆಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಶೌಚಾಲು, ವಿದ್ಯುತ್ ವ್ಯವಸ್ಥೆ ಬಗ್ಗೆಯೂ ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ADVERTISEMENT

ಚುನಾವಣಾ ನೀತಿ ಸಂಹಿತೆ ನಿಯಮದಂತೆ ಅನಧಿಕೃತ ಹಣ, ಮದ್ಯ, ವಸ್ತುಗಳ ಸಾಗಾಟಕ್ಕೆ‌ ಕಡಿವಾಣ ಹಾಕಲು ಎಸ್‌ಎಸ್‌ಟಿ ತಂಡ‌ಗಳನ್ನು ರಚಿಸಲಾಗಿದೆ. ಶೀಘ್ರವೇ ಜಿಲ್ಲಾ ಹಾಗೂ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದ ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಚೆಕ್ ಪೋಸ್ಟ್‌‌ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ತೀವ್ರ‌ ನಿಗಾ ವಹಿಸಬೇಕು. ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣವಾಗಿ ತಡೆಯೊಡ್ಡಬೇಕು ಎಂದರು.

ಸಭೆಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ ಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿಸಿಪಿ ಅಡ್ಡೂರು ಶ್ರೀನಿ ವಾಸಲು, ಜಿ.ಪಂ ಸಿಇಒ ಡಾ.ಗಿರೀಶ್ ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಸೇರಿ ವಲಯ ಅಧಿಕಾರಿಗಳು, ಎಸ್‌ಎಸ್‌ಟಿ ತಂಡದ ಅಧಿಕಾರಿಗಳು ಇದ್ದರು.

ಮತದಾರರಿಗೆ ಆಮಿಷ: ಕ್ರಮದ ಎಚ್ಚರಿಕೆ

ಕಲಬುರಗಿ: ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ 60 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಮತದಾರರಿಗೆ ಆಮಿಷಯೊಡ್ಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿ.ಸಿ ಯಶವಂತ ವಿ ಗುರುಕರ್ ಎಚ್ಚರಿಸಿದರು.

ಮಂಗಳವಾರ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆಯ ನಿಯಮದಂತೆ ಅನಧಿಕೃತ ಹಣ, ಮದ್ಯ, ವಸ್ತುಗಳ ಸಾಗಾಟಕ್ಕೆ ಕಡಿವಾಣ ಹಾಕಲು ಎಸ್‌ಎಸ್‌ಟಿ ತಂಡಗಳನ್ನು ರಚಿಸಲಾಗಿದೆ. ಗಡಿ ಭಾಗದಲ್ಲಿ ಕಟ್ಟೆಚ್ಚರ ಸಹ ವಹಿಸಲಾಗುವುದು ಎಂದರು.

ಈಗಾಗಲೇ ಮತಗಟ್ಟೆಗಳಿಗೆ ಸೆಕ್ಟೆರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆ ಸಮೀಪ ಇರುವುದರಿಂದ ರಾಜಕೀಯ ಪಕ್ಷಗಳಿಗೆ ಔತಣಕೂಟಗಳನ್ನು ಏರ್ಪಡಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಬ್ಯಾನರ್‌, ಭಿತ್ತಿಪತ್ರಗಳು, ಕಟೌಟ್‌ಗಳನ್ನು ಹಾಕುವಂತಿಲ್ಲ ಎಂದು ಎಚ್ಚರಿಸಿದರು.

ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ರಾಜಕೀಯ ಪಕ್ಷಗಳು ಎಚ್ಚರವಹಿಸಬೇಕು. ಸಭೆ-ಸಮಾರಂಗಗಳು ಏರ್ಪಡಿಸಿ ಹಣ ಹಂಚುವುದು, ಸೀರೆ, ಕುಕ್ಕರ್‌ ವಿತರಿಸುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಎಂ, ಆಪ್‌ ಸೇರಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.