ADVERTISEMENT

ಆಳಂದ: ಖಜೂರಿ, ಹಿರೋಳ್ಳಿ ಗಡಿಗೆ ಡಿ.ಸಿ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:43 IST
Last Updated 9 ಮೇ 2020, 9:43 IST
ಆಳಂದದ ಗಡಿ ತಪಾಸಣೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಬಿ.ಶರತ್ ಶುಕ್ರವಾರ ನೀಡಿ ಪರಿಶೀಲಿಸಿದರು
ಆಳಂದದ ಗಡಿ ತಪಾಸಣೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಬಿ.ಶರತ್ ಶುಕ್ರವಾರ ನೀಡಿ ಪರಿಶೀಲಿಸಿದರು   

ಆಳಂದ: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಖಜೂರಿ, ಹಿರೋಳ್ಳಿ ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಬಿ.ಶರತ್‌ ಶುಕ್ರವಾರ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದರು.

ರಾಜ್ಯ ಸರ್ಕಾರವು ಹೊರ ರಾಜ್ಯದ ವಲಸಿಗ ಕೂಲಿಕಾರ್ಮಿಕರು ಹಾಗೂ ವಿದ್ಯಾರ್ಥಿಗಳನ್ನು ಕರೆತರಲು ನಿರ್ದೇಶನ ನೀಡಿದೆ. ಮಹಾರಾಷ್ಟ್ರದ ವಲಸಿಗರು ಈ ಗಡಿ ಮಾರ್ಗದ ಮೂಲಕ ರಾಜ್ಯದೊಳಗೆ ಪ್ರವೇಶಿಸಲಿದ್ದಾರೆ. ಇಲ್ಲಿಯೇ ಅವರಿಗೆ ಅಗತ್ಯ ತಪಾಸಣೆ ಮಾಡುವ ವೈದ್ಯರು ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ, ನಿಖರವಾದ ಡಾಟಾ ಎಂಟ್ರಿ ಮಾಡುವುದಕ್ಕೂ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿ ಎಲ್ಲದರ ಬಗ್ಗೆಯೂ ಕೂಲಂಕಶವಾಗಿ ಮಾಹಿತಿ ಪಡೆದರು.

‘ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಗಡಿ ಮಾರ್ಗದಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯ ತಪಾಸಣೆ, ಮಾಹಿತಿ ದಾಖಲೆ ಕೈಗೊಳ್ಳಲು ಕಟ್ಟೆಚ್ಚೆರ ವಹಿಸಬೇಕು. ಪ್ರತಿಯೊಂದು ವಾಹನವನ್ನು ಕಡ್ಡಾಯ ತಪಾಸಣೆ ಮಾಡಬೇಕು. ಗಡಿಯಲ್ಲಿನ ಒಳ ರಸ್ತೆಗಳ ಮೇಲೆಯೂ ನಿಗಾವಹಿಸಬೇಕು. ಒಳ ಬರುವ ಮತ್ತು ಹೊರ ಹೋಗುವ ಪ್ರಯಾಣಿಕರ ಮಾಹಿತಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ತಹಶೀಲ್ದಾರ್ ದಯಾನಂದ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಂಜಯ ರೆಡ್ಡಿ, ಸಿಪಿಐ ಶಿವಾನಂದ ಗಾಣಿಗೇರ್, ಪಿಎಸ್ಐ ಬಾಪುರಾವ ಪಾಟೀಲ ಇದ್ದರು. ನಂತರ ಹಿರೋಳ್ಳಿ ಗಡಿ ತಪಾಸಣಾ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಟೆಂಟ್‌, ಕಂಪ್ಯೂಟರ್‌, ಇತರ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.