ADVERTISEMENT

ಜಿಲ್ಲೆಗೆ 10 ಲಕ್ಷ ವ್ಯಾಕ್ಸಿನ್‌: ಅಶ್ವಥ್‌ ನಾರಾಯಣ ಭರವಸೆ

ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಸಚಿವ ನಿರಾಣಿ, ಸಂಸದ ಡಾ.ಜಾಧವ

​ಪ್ರಜಾವಾಣಿ ವಾರ್ತೆ
Published 25 ಮೇ 2021, 3:14 IST
Last Updated 25 ಮೇ 2021, 3:14 IST
ಸಚಿವ ಮುರುಗೇಶ ನಿರಾಣಿ ಹಾಗೂ ಸಂಸದ ಡಾ.ಉಮೇಶ ಜಾಧವ ಅವರು ಬೆಂಗಳೂರಿನಲ್ಲಿ ಸೋಮವಾರ ಡಿಸಿಎಂ ಅಶ್ವಥ್‌ ನಾರಾಯಣ ಅವರೊಂದಿಗೆ ಚರ್ಚೆ ನಡೆಸಿದರು
ಸಚಿವ ಮುರುಗೇಶ ನಿರಾಣಿ ಹಾಗೂ ಸಂಸದ ಡಾ.ಉಮೇಶ ಜಾಧವ ಅವರು ಬೆಂಗಳೂರಿನಲ್ಲಿ ಸೋಮವಾರ ಡಿಸಿಎಂ ಅಶ್ವಥ್‌ ನಾರಾಯಣ ಅವರೊಂದಿಗೆ ಚರ್ಚೆ ನಡೆಸಿದರು   

ಕಲಬುರ್ಗಿ: ಹಂತ ಹಂತವಾಗಿ 10 ಲಕ್ಷ ಕೋವಿಡ್‌ ಲಸಿಕೆ ಹಾಗೂ 100 ಎಂಫೊಟೆರೆಸಿನ್ ಇಂಜೆಕ್ಷನ್‌ಗಳನ್ನು ಕಲಬುರ್ಗಿ ಜಿಲ್ಲೆಗೆ ಸಂದಾಯ ಮಾಡಲು ಉಪಮುಖ್ಯಮಂತ್ರಿ ಡಾ.ಅಶ್ವಥ್‌ ನಾರಾಯಾಣ ಒಪ್ಪಿಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹಾಗೂ ಸಂಸದ ಡಾ.ಉಮೇಶ ಜಾಧವ ಅವರು ಬೆಂಗಳೂರಿನಲ್ಲಿ ಭೇಟಿಯಾಗಿ, ಜಿಲ್ಲೆಯ ಸ್ಥಿತಿಗತಿ ಮನವರಿಕೆ ಮಾಡಿದ ನಂತರ ಅಶ್ವಥ್‌ ನಾರಾಯಣ ಈ ಒಪ್ಪಿಗೆ ಸೂಚಿಸಿದ್ದಾರೆ.

‘ಕಲಬುರ್ಗಿಯು ರಾಜ್ಯದಲ್ಲೇ 4ನೇ ಅತಿ ದೊಡ್ಡ ಜಿಲ್ಲೆಯಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಜನವರಿಯಿಂದ ಇಲ್ಲಿಯವರೆಗೂ 3 ಲಕ್ಷ ಲಸಿಕೆ ಮಾತ್ರ ಸಿಕ್ಕಿದೆ. ಇದು ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದರೆ ಶೇ 15ರಷ್ಟು ಮಾತ್ರ ಆಗುತ್ತದೆ. ಜಿಲ್ಲೆಯಲ್ಲಿ ಲಸಿಕೆ ಪಡೆದವರ ಸಂಖ್ಯೆ ತುಂಬಾ ಕಡಿಮೆ ಇದೆ. ಇದೇ ಕಾರಣಕ್ಕೆ ಕೋವಿಡ್ ಪ್ರಕರಣಗಳಲ್ಲಿ ಸಾವುಗಳೂ ಹೆಚ್ಚಾಗಿ ಸಂಭವಿಸುತ್ತಿವೆ. ತಕ್ಷಣಕ್ಕೆ ಲಸಿಕೆ ಪೂರೈಸಲು ವ್ಯವಸ್ಥೆ ಮಾಡಬೇಕು’ ಎಂದು ಸಂಸದರು ಮನವಿ ಮಾಡಿದರು.

ADVERTISEMENT

‘ಮೇ 24ರವರೆಗೆ ಒಟ್ಟು 53 ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ಪತ್ತೆಯಾಗಿವೆ. ಅವರನ್ನು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರ ಉಪಚಾರಕ್ಕೆ ಎಂಪೋಟೆರೇಸಿನ್ ಇಂಜೆಕ್ಷನ್‌ಗಳು ತುರ್ತು ಬೇಕಾಗಿವೆ’ ಎಂದು ಸಂಸದರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಮಂಗಳವಾರವೇ 100 ಇಂಜಕ್ಷನ್‌ಗಳನ್ನು ಕಲಬುರ್ಗಿಗೆ ತಲುಪಿಸಲಾಗುವುದು’ ಎಂದು ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವ ಮುರುಗೇಶ ನಿರಾಣಿ, ‘ಕೊರೊನಾ ಮೂರನೇ ಅಲೆಯ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ 5 ವೆಂಟಿಲೇಟರ್‌ ಬೆಡ್‌, 3 ಎಚ್‌ಡಿಯು ಹಾಗೂ 20 ಸಾಮಾನ್ಯ ಬೆಡ್‌ಗಳ ವ್ಯವಸ್ಥೆ ಮಾಡಲು ಸಹಕರಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.