ADVERTISEMENT

ದೀಪಗಳ ಅಬ್ಬರ, ಮನೆ ತುಂಬಿದ ಸಡಗರ

ಜಿಲ್ಲೆಯಾದ್ಯಂತ ಸಂಭ್ರಮದ ಬೆಳಕಿನ ಹಬ್ಬ ಆಚರಣೆ, ಮರುಕಟ್ಟೆಗಳಲ್ಲಿ ಜನಜಂಗುಳಿ, ವರ್ತಕರ ಜೇಬು ತುಂಬ ಕಾಂಚಾಣ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 2:59 IST
Last Updated 15 ನವೆಂಬರ್ 2020, 2:59 IST
ಕಲಬುರ್ಗಿಯ ಪಿ ಅಂಡ್‌ ಟಿ ಕಾಲೊನಿಯಲ್ಲಿ ಶನಿವಾರ ಹೂಕುಂಡ ಹಚ್ಚಿ ಸಂಭ್ರಮಿಸಿದರು
ಕಲಬುರ್ಗಿಯ ಪಿ ಅಂಡ್‌ ಟಿ ಕಾಲೊನಿಯಲ್ಲಿ ಶನಿವಾರ ಹೂಕುಂಡ ಹಚ್ಚಿ ಸಂಭ್ರಮಿಸಿದರು   

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ಬೆಳಕಿನ ಹಬ್ಬದ ಸಡಗರ. ಮನೆ ಮಂದಿಯೆಲ್ಲ ಸೇರಿಕೊಂಡು ಸಂಭ್ರಮದಿಂದ ಲಕ್ಷ್ಮಿ ಪೂಜೆ ಮಾಡಿ, ಹಣತೆಗಳನ್ನು ಹಚ್ಚಿ, ಮನೆಯ ಮುಂದೆ ಕಾರ್ತಿಕ ಬಿಟ್ಟಿಗಳನ್ನು ನೇತು ಹಾಕಿದರು. ಕಳೆದ ಎಂಟು ತಿಂಗಳಿಂದ ಕೊರೊನಾ ಕಾರ್ಮೋಡದ ಮಧ್ಯೆ ಒದ್ದಾಡಿದ ಜನರಿಗೆ ದೀಪಗಳ ಹಬ್ಬ ಹೊಸ ಚೈತನ್ಯ ನೀಡಿತು.

ಪ್ರತಿಯೊಬ್ಬರ ಮನೆಯ ಮುಂದೆ ಇಳಿಸಂಜೆಗೆ ಆಕಾಶಬುಟ್ಟಿಗಳು ಬೆಳಗಿದವು. ಪುಟ್ಟಪುಟ್ಟ ಹಣತೆಗಳನ್ನು ಸಾಲಾಗಿ ಹೊಂದಿಸಿ ಬೆಳಗಿಸಿದರು. ಮಕ್ಕಳು, ಯುವಕ, ಯುವತಿಯರು ಸುರಸುರ ಬತ್ತಿ ಬೆಳಗಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಶುಕ್ರವಾರವೇ ಆರಂಭದ ದಿನವಾಗಿ ನೀರು ತುಂಬುವ ಹಬ್ಬ ಆಚರಿಸಿದ ಗೃಹಿಣಿಯರು, ಶನಿವಾರ ನಸುಕಿನಲ್ಲೇ ಎದ್ದು ಹಬ್ಬದ ಕಾರ್ಯಕ್ಕೆ ಸನ್ನದ್ಧರಾದರು. ನಸುಕಿನಲ್ಲೇ ಮನೆಗಳನ್ನು ಸ್ವಚ್ಛಗೊಳಿಸಿ, ರಂಗವಲ್ಲಿ ಹಾಕಿ, ತಳಿರು– ತೋರಣ ಕಟ್ಟಿದರು. ಸೂರ್ಯೋದಯದ ನಂತರ ಕುಟುಂಬ ಸಮೇತರಾಗಿ ದೇವಸ್ಥಾನಗಳತ್ತ ಹೆಜ್ಜೆ ಹಾಕಿದರು.‌ ದೇವರ ದರ್ಶನದ ಬಳಿಕ ಮನೆಗಳಿಗೆ ಮರಳಿ ಲಕ್ಷ್ಮಿ ಪೂಜೆಯ ಕೈಂಕರ್ಯ ಆರಂಭಿಸಿದರು.

ADVERTISEMENT

ತುಂಬು ಕಳಸದ ಮೇಲೆ ತೆಂಗಿನಕಾಯಿ ಇಟ್ಟು, ಅದಕ್ಕೆ ಕಣ– ಮಡಿ ಸೀರೆ ಏರಿಸಿದರು. ಮನೆಯಲ್ಲಿನ ಚಿನ್ನಾಭರಣಗಳನ್ನು ತೊಡಿಸಿದರು. ಹಣೆಬೊಟ್ಟು ಇಟ್ಟು, ಬಳೆ, ಚೈನು, ಕಾಲ್ಗೆಜ್ಜೆ, ಬೈತಲೆ, ಬೆಂಡೋಲೆ ಒಡವೆಗಳನ್ನು ಹಾಕಿ ಅಲಂಕರಿಸಿದರು. ನಂತರ ಮನೆಯ ಮಂದಿ ಎಲ್ಲ ಸೇರಿಕೊಂಡು ಲಕ್ಷ್ಮಿಸ್ತುತಿ ಹಾಡಿ, ಮಂಗಳಾರತಿ ಮಾಡಿದರು.

ನರಕ ಚತುರ್ದಶಿ ಹಾಗೂ ಅಮಾವಾಸ್ಯೆ ಎರಡೂ ಒಂದೇ ದಿನ ಬಂದ ಕಾರಣ, ಕೆಲವರು ಶನಿವಾರ ವಾಹನಗಳು ಹಾಗೂ ಅಂಗಡಿಗಳನ್ನು ಮಾತ್ರ ‍ಪೂಜೆ ಮಾಡಿದರು. ಭಾನುವಾರ ಬೆಳಿಗ್ಗೆ ಅಮಾವಸ್ಯೆ ಮುಗಿದ ಮೇಲೆ ಉಳಿದವರು ಪೂಜೆ ಮಾಡುವ ಸಿದ್ಧತೆ ಮಾಡಿಕೊಂಡರು.

ಆರತಿ ಬೆಳಗಿ ಹರಕೆ: ಮನೆಯ ಗೃಹಿಣಿಯರು ಹಾಗೂ ಹೆಣ್ಣುಮಕ್ಕಳೆಲ್ಲ ಹೊಸ ಬಟ್ಟೆ ಉಟ್ಟು ಗಡಿಬಿಡಿಯಲ್ಲಿ ಓಡಾಡಿದರು. ಮಧ್ಯಾಹ್ನ ಪುರುಷರು, ಗಂಡುಮಕ್ಕಳು ಹಾಗೂ ಹಿರಿಯರಿಗೆ ಕುಂಕುಮ ತಿಲಕ ಇಟ್ಟು, ಆರತಿ ಬೆಳಗಿ ಹರಸಿದರು. ಧನಲಕ್ಷ್ಮಿ ಪೂಜೆ ಶನಿವಾರದ ವಿಶೇಷ. ಇದರೊಂದಿಗೆ ಮನೆಯ ಸದಸ್ಯರೆಲ್ಲ ಮಧ್ಯಾಹ್ನದ ಹೊತ್ತಿಗೆ ಶ್ಯಾವಿಗೆ ಪಾಯಸ– ಹಾಲಿನ ಸವಿರುಚಿ ಭೋಜನ ಸವಿದರು. ಕುರುಕಲು ತಿಂಡಿಗಳಾದ ಶಂಕರಪೋಳಿ, ಚೆಕ್ಕುಲಿ, ಕೋಡುಬಳೆ, ಹಪ್ಪಳ, ಶೇಂಗಾ ಹೋಳಿಗೆ ಮುಂತಾದ ಪಂಚಪಳಾರಗಳನ್ನು ಸವಿದು ಸಂಭ್ರಮಿಸಿದರು. ಪಕ್ಕದ ಮನೆಯವರಿಗೂ ಪಳಾರ್‌ ಹಂಚಿ ಖುಷಿ ಪಟ್ಟರು. ಮೊಬೈಲ್‌ಗಳಲ್ಲಿ ದೀಪಾವಳಿ ಸಂದೇಶದ ಫೋಟೊ, ವಿಡಿಯೊಗಳು ದಿನವಿಡೀ ಹರಿದಾಡಿದವು.

‌ಮಾರುಗಟ್ಟೆಯಲ್ಲೂ ಜನಜಂಗುಳಿ: ಇತ್ತ ನಗರದ ಮಾರುಕಟ್ಟೆಗಳಂತೂ ಜನರಿಂದ ತುಂಬಿ ತುಳುಕಿದವು. ಬಣ್ಣಬಣ್ಣದ– ವಿದ್ಯುತ್‌ ದೀಪಾಲಂಕಾರಗಳ ಸರ, ಆಕಾಶಬುಟ್ಟಿ, ಹಣತೆಗಳ ಖರೀದಿ ನಡೆದೇ ಇತ್ತು.

ಅದರಲ್ಲೂ ಸೂಪರ್‌ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಅಗತ್ಯದ ಹೂ, ಹಣ್ಣು, ಕಬ್ಬು, ಬಾಳೆ ದಿಂಡು, ಮಹಿಳೆಯರಿಗೆ ಉಡಿ ತುಂಬುವ ಸಾಮಗ್ರಿ, ಮಣ್ಣಿನಮಡಿಕೆ, ತಟ್ಟೆ, ದೀಪ ಇವುಗಳೊಂದಿಗೆ ದಿನಸಿ ವಸ್ತು, ಬಟ್ಟೆ, ಆಭರಣಮ ವಾಹನಗಳ ಖರೀದಿಗೂ ಜನ ಮುಗಬಿದ್ದರು. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಗುಲಾಬಿ, ಸಂಪಿಗೆ, ಚೆಂಡು ಹೂ ಗಳ ಬೆಲೆ ಸ್ವಲ್ಪ ಹೆಚ್ಚಿದೆ. ಅದೇ ರೀತಿ ಸೇಬು, ದಾಳಿಂಬೆ, ಬಾಳೆಹಣ್ಣು, ಚಿಕ್ಕು, ಸೀತಾಫಲ, ಮೋಸಂಬಿ, ಪಪ್ಪಾಯ, ಹತ್ತಿ ಹಣ್ಣುಗಳೂ ಬಿಕರಿಯಾದವು.

ಲಾಕ್‌ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಬೆಳಕಿನ ಹಬ್ಬ ತುಸು ಸಂಭ್ರಮವನ್ನೇ ಹೊತ್ತು ತಂದಿದ್ದು ಗೋಚರಿಸಿತು.

ಕಿವಿಗಡಚಿಕ್ಕಿದ ಪಟಾಕಿ ಸದ್ದು

ಕಲಬುರ್ಗಿ: ಸುಪ್ರಿಂ ಕೋರ್ಟ್‌ ನಿರ್ದೇಶನದಂತೆ ಪರಿಸರಕ್ಕೆ ಹೆಚ್ಚು ಹಾನಿ ಮಾಡದ, ಹೆಚ್ಚು ಸದ್ದು ಮಾಡದ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಆದರೂ ಕರ್ಕಶವಾದ ಶಬ್ದ ಮಾಡುವ ದೊಡ್ಡ ‍ಪಟಾಕಿಗಳ ಸದ್ದು ನಗರದೆಲ್ಲೆಡೆ ಯಥೇಚ್ಚವಾಗಿ ಕೇಳಿಸಿತು.

ಆಟಂ ಬಾಂಬ್‌ ಪಟಾಕಿ, ಲಕ್ಷ್ಮಿ ಪಟಾಕಿ, ಮದ್ದಿನ ಕುಡಿಕೆಗಳನ್ನೂ ಬೆಳಗಿದ್ದು ಎಲ್ಲೆಡೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.