ಕಲಬುರಗಿ: ಬೆಳಕಿನ ಹಬ್ಬ ದೀಪಾವಳಿಯ ಅದ್ದೂರಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಬುಧವಾರ ಜೋರಾಗಿ ಕಂಡುಬಂತು.
ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಲಕ್ಷ್ಮಿಪೂಜೆ, ದೀಪಾವಳಿ ಹಬ್ಬದ ಭಾಗವಾದ ನರಕ ಚತುರ್ದಶಿ, ಬಲಿಪಾಡ್ಯಮಿ ಸಿದ್ಧತೆಗಾಗಿಯೂ ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ರಾಮಮಂದಿರ ವೃತ್ತ, ಶಹಾಬಜಾರ್, ನ್ಯೂ ವೆಜಿಟೇಬಲ್ ಮಾರ್ಕೆಟ್ ಸೇರಿ ಹಲವು ಕಡೆಗಳ ಅಂಗಡಿ– ಮುಂಗಟ್ಟುಗಳ ಮುಂದೆ ಗ್ರಾಹಕರು ಖರೀದಿಗಾಗಿ ಮುಗಿಬಿದ್ದರು.
ಹಬ್ಬದ ಸಂಭ್ರಮಕ್ಕೆ ಸಾಕ್ಷಿ ಎಂಬುವಂತೆ ನಗರದ ಮಾರುಕಟ್ಟೆ ಪ್ರದೇಶಗಳು ಗ್ರಾಹಕರ ದಟ್ಟಣೆಯಿಂದ ಗಿಜಿಗುಡುತ್ತಿದ್ದವು. ಬಟ್ಟೆ, ಆಕಾಶಬುಟ್ಟಿ, ಹಣತೆ, ಚಿನ್ನಾಭರಣ, ವಾಹನ ಶೋ ರೂಂ, ಪೂಜಾ ಸಾಮಗ್ರಿ, ಪಟಾಕಿ ಅಂಗಡಿಗಳ ವರ್ತಕರ ಮುಖದಲ್ಲಿ ಮಂದಹಾಸ ಕಂಡುಬಂದು ವ್ಯಾಪಾರವೂ ಕಳೆಗಟ್ಟಿತು.
ಬೂದು ಕುಂಬಳಕಾಯಿ ₹80ರಿಂದ ₹200 ನಡುವೆ ಮಾರಾಟವಾದವು. ಚಿಕ್ಕ ಗಾತ್ರದ ಕುಂಬಳಕಾಯಿ ₹80ರಿಂದ ₹100ಕ್ಕೆ ಖರೀದಿಯಾದವು. ಒಂದು ಜೋಡಿ ಕಬ್ಬು ಮತ್ತು ಬಾಳೆ ದಿಂಡು ₹120ಕ್ಕೆ ಮಾರಾಟವಾದರೆ ಹತ್ತು ನಿಂಬೆಹಣ್ಣುಗಳು ₹50 ರಂತೆ ಮಾರಾಟ ಆದವು.
ತಲಾ ಐದು ದಾಳಿಂಬೆ, ಸೀತಾಫಲಗಳಿಗೆ ₹ 100, ತಲಾ ನಾಲ್ಕು ಸೇಬು, ಮೋಸಂಬಿ, ಕಿತ್ತಳೆ ಹಣ್ಣುಗಳಿಗೆ ₹180, ಒಂದು ಡಜನ್ ಬಾಳೆಹಣ್ಣು ₹50 ಹಾಗೂ ಪೂಜೆಗಾಗಿ ಐದು ಬಗೆಯ ತಲಾ ಎರಡೆರಡು ಹಣ್ಣುಗಳಿರುವ ಒಂದು ಬುಟ್ಟಿ ₹150 ಕೊಟ್ಟು ಗ್ರಾಹಕರು ಖರೀದಿಸಿದರು.
ಬಿಡಿ ಚಂಡು ಹೂವುಗಳ ಬೆಲೆ ಕೆ.ಜಿ.ಗೆ ₹80ರಿಂದ ₹120 (ಗಾತ್ರ ಆಧರಿಸಿ) ಮಾರಾಟವಾದವು. ಬಿಳಿ ಮತ್ತು ಹಳದಿ ಸೇವಂತಿಗಳ ಹೂವುಗಳ ದರ ₹350 ಇತ್ತು. ಸಣ್ಣ ಗುಲಾಬಿ ಕೆ.ಜಿ.ಗೆ ₹460 ರಷ್ಟಿತ್ತು.
‘ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಮಾರಾಟ ಜೋರಾಗಿದೆ. ಮುಂಚೆ ನಗರದಲ್ಲಿ ವಾಸವಿದ್ದವರು ಮಾತ್ರ ಮಾರುಕಟ್ಟೆಗೆ ಬರುತ್ತಿದ್ದರು. ಬಸ್ ಫ್ರೀ ಇರುವುದರಿಂದ ಸುತ್ತಲಿನ ಗ್ರಾಮಗಳು ಸೇರಿದಂತೆ ದೂರದ ಊರುಗಳಿಂದಲೂ ಮಹಿಳೆಯರು ಕುಟುಂಬ ಸಮೇತರಾಗಿ ಬರುತ್ತಿದ್ದಾರೆ’ ಎಂದು ವರ್ತಕ ದತ್ತು ಕಾಳೆ ‘ಪ್ರಜಾವಾಣಿ’ಗೆ ತಿಳಿಸಿದರು.
ಕಪಡಾ ಬಜಾರ್, ಶಾಪಿಂಗ್ ಮಾಲ್‌ಗಳು, ಬಟ್ಟೆ ಅಂಗಡಿಗಳು, ಸರಾಫ್ ಬಜಾರ್‌ನಲ್ಲಿ ಖರೀದಿಯ ಭರಾಟೆ ಕಂಡುಬಂತು. ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ವಾಹನಗಳ ಸಂಚಾರ ದಟ್ಟಣೆಯೂ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.