ADVERTISEMENT

ಕಲಬುರ್ಗಿ | ದಾಖಲೆಗಳ ದೋಷ: 13 ಸಾವಿರ ಕಾರ್ಮಿಕರ ‘ನೆರವು’ ಪೆಂಡಿಂಗ್‌

ತಾಂತ್ರಿಕ ತೊಂದರೆಯಿಂದ ಬ್ಯಾಂಕ್‌ ಖಾತೆಗೆ ಜೋಡಣೆಯಾಗದ ಆಧಾರ್

ಸಂತೋಷ ಈ.ಚಿನಗುಡಿ
Published 30 ಜೂನ್ 2020, 18:30 IST
Last Updated 30 ಜೂನ್ 2020, 18:30 IST
ದಾಖಲೆಗಳ ಸಲ್ಲಿಕೆಗೆ ಕಲಬುರ್ಗಿಯ ಕಾರ್ಮಿಕ ಭವನದ ಮುಂದೆ ಸರದಿಯಲ್ಲಿ ನಿಂತ ಕಾರ್ಮಿಕ ಮಹಿಳೆಯರು
ದಾಖಲೆಗಳ ಸಲ್ಲಿಕೆಗೆ ಕಲಬುರ್ಗಿಯ ಕಾರ್ಮಿಕ ಭವನದ ಮುಂದೆ ಸರದಿಯಲ್ಲಿ ನಿಂತ ಕಾರ್ಮಿಕ ಮಹಿಳೆಯರು   

ಕಲಬುರ್ಗಿ: ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹ 5,000 ಆರ್ಥಿಕ ನೆರವು ಪಡೆಯಲು, ಜಿಲ್ಲೆಯ ಸುಮಾರು 13 ಸಾವಿರ ಕಾರ್ಮಿಕರು ಇನ್ನಷ್ಟು ದಿನ ಕಾಯಬೇಕಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸವಿಲ್ಲದೇ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವಿನ ಪ್ಯಾಕೇಜ್‌ ನೀಡಿದೆ. ಅದರಂತೆ, ಎರಡು ತಿಂಗಳಿಂದ ಜಿಲ್ಲೆಯ ಎಲ್ಲ ಕಾರ್ಮಿಕರ ಲೇಬರ್‌ ಕಾರ್ಡ್‌, ಆಧಾರ್‌ ನಂಬರ್‌ಗಳನ್ನು ಅವರ ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡುವ ಕೆಲಸ ಭರದಿಂದ ಸಾಗಿದೆ.

ನೋಂದಣಿ ಮಾಡಿಕೊಂಡ 60,800 ಕಟ್ಟಡ ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ. ಇವರಲ್ಲಿ ಈಗಾಗಲೇ 48,000 ಕಾರ್ಮಿಕರಿಗೆ ಆರ್ಥಿಕ ನೆರವು ತಲುಪಿದೆ. ಉಳಿದ 12,800 ಮಂದಿಯ ಹಣ ತಾಂತ್ರಿಕ ದೋಷದ ಕಾರಣ ಇನ್ನೂ ಜಮೆ ಆಗಿಲ್ಲ.

ADVERTISEMENT

ಗೌಂಡಿ ಕೆಲಸಗಾರರು, ಸಿಮೆಂಟ್‌ ಹೊರುವವರು, ಉಸುಕು ಸಾಣಿಸುವವರು, ಬಾರ್‌ ಬಿಲ್ಡಿಂಗ್‌, ಪೀಠೋಪಕರಣ ಕೆಲಸ, ಕಲ್ಲು ಒಡೆಯುವವರು, ವೈರಿಂಗ್‌, ಟೈಲ್ಸ್‌ ಫಿಟ್ಟಿಂಗ್‌, ಪೈಪ್‌ಲೈನ್‌ ಲೋಡಣೆ... ಹೀಗೆ ಒಂದು ಕಟ್ಟಡ ಪೂರ್ಣಗೊಳ್ಳಲು ಶ್ರಮ ಹಾಕುವ ಎಲ್ಲರೂ ಇದರಲ್ಲಿ ಸೇರಿದ್ದಾರೆ.

ಜೂನ್‌ 30 ಕೊನೆ ದಿನ: ನೆರವಿನ ಹಣಕ್ಕಾಗಿ ನೋಂದಣಿ ಮಾಡಲು ಜೂನ್‌ 30 ಕೊನೆ ದಿನ. ಹೀಗಾಗಿ, ಇಲ್ಲಿನ ಎಂ.ಎಸ್‌.ಕೆ. ಮಿಲ್‌ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿರುವಕಾರ್ಮಿಕ ಇಲಾಖೆ ಕಚೇರಿ ಮುಂದೆ ಕಳೆದೊಂದು ವಾರದಿಂದ ಜನಜಂಗುಳಿ ಸೇರುತ್ತಿದೆ. ಅದರಲ್ಲೂ ಸೋಮವಾರ ಹಾಗೂ ಮಂಗಳವಾರ ನೂರಾರು ಕಾರ್ಮಿಕರ ತಮ್ಮ ದಾಖಲೆಗಳನ್ನು ಹಿಡಿದು ಕಚೇರಿ ಮುಂದೆ ಗಂಟೆಗಟ್ಟಲೇ ಕಾದು ನಿಂತರು.‌

ಈಗಾಗಲೇ ಎಲ್ಲ ಕಾರ್ಮಿಕರ ದಾಖಲೆಗಳನ್ನು ಸಂಗ್ರಹಿಸಿ, ನೋಂದಣಿ ಕಾರ್ಯ ಮುಗಿಸಲಾಗಿದೆ. ಆದರೂ ಇನ್ನೂ ಖಾತೆಗೆ ಹಣ ಬಾರದ ಹಲವರು ಮತ್ತೆ ಮತ್ತೆ ಎರಡು– ಮೂರು ಬಾರಿ ದಾಖಲೆ ನೀಡುತ್ತಿದ್ದಾರೆ. ಕೆಲವರ ಹೆಸರಿನಲ್ಲಿ ದೋಷ, ಕಾರ್ಮಿಕರ ಸಂಖ್ಯೆ, ಬ್ಯಾಂಕ್‌ ಖಾತೆಯಲ್ಲಿ ಹೆಸರು ಬದಲಾಗಿದ್ದು, ದಾಖಲೆಗಳು ಸರಿ ಇಲ್ಲದಿರುವುದು, ಐಎಫ್‌ಎಸ್‌ಸಿ ಕೋಡ್‌ ಸಮಸ್ಯೆ... ಹೀಗೆ ಕೆಲವು ತಾಂತ್ರಿಕ ದೋಷಗಳ ಕಾರಣ ಹಲವರ ಆಧಾರ್‌ ಜೋಡಣೆ ಆಗಿಲ್ಲ. ಅಂಥವರ ನೋಂದಣಿಯನ್ನು ಮತ್ತೆ ಮಾಡಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಕ್ಷೌರಿಕ,ಅಗಸರಿಗೆ ಜುಲೈ 10ರವರೆಗೆ ಅವಕಾಶ’
‘ಕ್ಷೌರಿಕ ಹಾಗೂ ಅಗಸ ವೃತ್ತಿ ಮಾಡುವವರಿಗೆ ಆರ್ಥಿಕ ನೆರವಿಗೆ ನೋಂದಣಿ ಮಾಡಿಕೊಳ್ಳುವ ಅವಧಿಯನ್ನು ಜುಲೈ 10ರವವರೆಗೂ ವಿಸ್ತರಿಸಲಾಗಿದೆ. ಫಲಾನುಭವಿಗಳು ಆತಂಕಕ್ಕೆ ಒಳಗಾಗಿ ಏಕಾಏಕಿ ಗುಂಪಾಗಿ ಕಚೇರಿ ಮುಂದೆ ಕಾಯಬೇಕಿಲ್ಲ. ಆನ್‌ಲೈನ್‌ನಲ್ಲಿ ಎಲ್ಲರಿಗೂ ನೋಂದಣಿಗೆ ಅವಕಾಶವಿದೆ. ಹತ್ತು ದಿನ ಹೆಚ್ಚುವರಿ ಕಾಲಾವಕಾಶ ನೀಡಿದ್ದನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಕಾರ್ಮಿಕ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಟ್ಟಡ ಕಾರ್ಮಿಕರ ದಾಖಲೆ ಪಡೆಯುವುದನ್ನು ಜೂನ್‌ 30ಕ್ಕೆ ಮುಗಿಸಲಾಗಿದೆ. ಇನ್ನೂ ಯಾರಾದರೂ ಬಾಕಿ ಉಳಿದಿದ್ದರೆ ಆತಂಕ ಪಡಬೇಕಿಲ್ಲ. ಕಾರ್ಮಿಕ ಸಂಘಟನೆಗಳ ಮೂಲಕ ಫಲಾನುಭವಿ ತನ್ನ ಅಹವಾಲು ಸಲ್ಲಿಸಿ ನೆರವು ಪಡೆದುಕೊಳ್ಳಬಹುದು’ ಎಂದೂ ಅವರು ಹೇಳಿದರು.

ಅಂಕಿ ಅಂಶ
2,751:
ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡ ಕ್ಷೌರಿಕರು
1,041:ಫಲಾನುಭವಿಗಳಾದ ಅಗಸರು
25,000‌:ಮೇ ತಿಂಗಳಲ್ಲೇ ಹಣ ಪಡೆದ ಕಟ್ಟಡ ಕಾರ್ಮಿಕರು‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.